ಬ್ರೇಕಿಂಗ್ ನ್ಯೂಸ್
ಕರ್ನಾಟಕ

ವಿದ್ಯಾರ್ಥಿಗಳ ಭವಿಷ್ಯಕ್ಕೆ ಸರ್ಕಾರದ ಮಹತ್ವದ ಹೆಜ್ಜೆ; 8ನೇ ತರಗತಿಗೂ ಇಂಗ್ಲಿಷ್ ಮೀಡಿಯಂ

ಬೆಂಗಳೂರು: Tulu Times l ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 30 ಸಾವಿರ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. 2026-27ನೇ ಶೈಕ್ಷಣಿಕ ಸಾಲಿನಿಂದ 278 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು 8ನೇ ತರಗತಿಗೆ ಮೇಲ್ದರ್ಜೆಗೇರಿಸಿ, ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಮುಂದುವರಿಸಲು ಸರ್ಕಾರ ಅನುಮತಿ ನೀಡಿದೆ. 2019-20ನೇ ಸಾಲಿನಲ್ಲಿ ರಾಜ್ಯದ 1,000 ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲಿಷ್ ಅಥವಾ ದ್ವಿಭಾಷಾ ಮಾಧ್ಯಮದ ತರಗತಿಗಳನ್ನು ಆರಂಭಿಸಲಾಗಿತ್ತು. ಈ ಶಾಲೆಗಳ ವಿದ್ಯಾರ್ಥಿಗಳು 2025-26ನೇ ಸಾಲಿನಲ್ಲಿ 7ನೇ ತರಗತಿ ಪೂರ್ಣಗೊಳಿಸಿದ್ದಾರೆ. ಆದರೆ ಹಲವು ಶಾಲೆಗಳಲ್ಲಿ 8ನೇ ತರಗತಿ ಇಂಗ್ಲಿಷ್ ಮಾಧ್ಯಮದಲ್ಲಿ ಲಭ್ಯವಿರದ ಕಾರಣ, ವಿದ್ಯಾರ್ಥಿಗಳು ಅನಿವಾರ್ಯವಾಗಿ ಕನ್ನಡ ಮಾಧ್ಯಮಕ್ಕೆ ಬದಲಾಗಬೇಕಾದ ಪರಿಸ್ಥಿತಿ ಎದುರಾಗಿತ್ತು.

ಈ ಸಮಸ್ಯೆಗೆ ಪರಿಹಾರವಾಗಿ ಶಾಲಾ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಇದೀಗ 278 ಶಾಲೆಗಳನ್ನು 8ನೇ ತರಗತಿಗೆ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ. ಶಾಲೆಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ, ಶಿಕ್ಷಕರ ಲಭ್ಯತೆ, ವಿದ್ಯಾರ್ಥಿ-ಶಿಕ್ಷಕ ಅನುಪಾತ, ಮೂಲಸೌಕರ್ಯ ಹಾಗೂ ಸಮೀಪದ ಇಂಗ್ಲಿಷ್ ಮಾಧ್ಯಮ ಶಾಲೆಗಳ ಅಂತರ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಲಾಗಿದೆ. 1,000 ಶಾಲೆಗಳ ಪೈಕಿ ನಾಲ್ಕು ಶಾಲೆಗಳಿಗೆ ಒಂದೇ ರೀತಿಯ DISE ಕೋಡ್ ಇರುವುದರಿಂದ ಅವುಗಳನ್ನು ಹೊರತುಪಡಿಸಿ 997 ಶಾಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಈ ಪೈಕಿ 331 ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಪ್ರಾಥಮಿಕವಾಗಿ ಪ್ರಸ್ತಾಪಿಸಲಾಗಿತ್ತು. ಅಂತಿಮವಾಗಿ 278 ಶಾಲೆಗಳಿಗೆ ಅನುಮೋದನೆ ದೊರೆತಿದೆ.

ಸರ್ಕಾರದ ಆದೇಶದಂತೆ ಈ ಮೇಲ್ದರ್ಜೆ ಪ್ರಕ್ರಿಯೆಯಿಂದ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಬಾರದು. ಹೊಸ ಶಿಕ್ಷಕ ಹುದ್ದೆಗಳನ್ನು ಸೃಷ್ಟಿಸದೆ, ಲಭ್ಯವಿರುವ ಶಿಕ್ಷಕರು ಹಾಗೂ ಮೂಲಸೌಕರ್ಯವನ್ನು ಬಳಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಈಗಾಗಲೇ ಮಂಜೂರಾಗಿರುವ ಶಿಕ್ಷಕರನ್ನು ಮರುಹಂಚಿಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್ 1, 2026ರಂದು ಹೊರಡಿಸಿರುವ ಸರ್ಕಾರದ ಆದೇಶದ ಮೂಲಕ 2026-27ನೇ ಸಾಲಿನಿಂದ 278 ಶಾಲೆಗಳಲ್ಲಿ 8ನೇ ತರಗತಿಯ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ 7ನೇ ತರಗತಿಯ ನಂತರ ಶಿಕ್ಷಣ ಮಾಧ್ಯಮ ಬದಲಿಸುವ ಆತಂಕದಲ್ಲಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಪರಿಹಾರ ದೊರೆತಂತಾಗಿದೆ.

Good news: English medium for Class 8 in 278 government schools – ತುಳುಟೈಮ್ಸ್

ಇದನ್ನೂ ಓದಿ :ಅಂಜೂರ ತಿನ್ನುವುದರಿಂದ ಏನಾಗುತ್ತದೆ? ತ್ವಚೆ–ಕೂದಲಿನ ಆರೈಕೆಗೆ ಇಲ್ಲಿದೆ ಮಾಹಿತಿ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/IKW_z7twgxc

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 221

You cannot copy content of this page