ಸುಳ್ಯ : Tulu Times l 2026–27ನೇ ಸಾಲಿನಲ್ಲಿ ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ತೋಟಗಾರಿಕಾ ಬೆಳೆಗಳ ಸಂರಕ್ಷಣೆ ಹಾಗೂ ಯಾಂತ್ರೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ತೋಟಗಾರಿಕಾ ಇಲಾಖೆ ವಿವಿಧ ಸಹಾಯಧನ ಯೋಜನೆಗಳನ್ನು ಜಾರಿಗೊಳಿಸಿದೆ. ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ರೋಗನಾಶಕಗಳ ಖರೀದಿಗೆ ಸಹಾಯಧನ ನೀಡುವುದರ ಜೊತೆಗೆ, ವಿವಿಧ ಕೃಷಿ ಯಂತ್ರೋಪಕರಣಗಳ ಖರೀದಿಗೂ ಅನುದಾನ ಲಭ್ಯವಿದೆ ಎಂದು ತೋಟಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.
ಅಡಿಕೆ ಬೆಳೆಗಾರರಿಗೆ ಪ್ರಮುಖ ಸಮಸ್ಯೆಯಾಗಿರುವ ಎಲೆಚುಕ್ಕೆ ರೋಗವನ್ನು ನಿಯಂತ್ರಿಸಲು ಬಳಸುವ ಪ್ರೋಪಿಕೋನಜಾಲ್, ಟೆಬುಕೋನಜಾಲ್, ಪ್ರೋಪಿನೆಬ್, ಕಾರ್ಬೆಂಡಾಜಿಂ + ಮ್ಯಾಂಕೋಜೆಬ್ ಹಾಗೂ ಕಾಪರ್ ಸಲ್ಫೇಟ್ (ಮೈಲು ತುತ್ತು) ಸೇರಿದಂತೆ ವಿವಿಧ ರೋಗನಾಶಕಗಳ ಖರೀದಿಗೆ ಶೇಕಡಾ 30ರಷ್ಟು ಸಹಾಯಧನ ನೀಡಲಾಗುತ್ತಿದೆ. ಪ್ರತಿ ಎಕರೆಗೆ ₹600ರಂತೆ, ಗರಿಷ್ಠ 5 ಎಕರೆಗೆ ಒಟ್ಟು ₹3,000ವರೆಗೆ ಸಹಾಯಧನ ಪಡೆಯುವ ಅವಕಾಶವನ್ನು ಇಲಾಖೆ ಕಲ್ಪಿಸಿದೆ.

ಈ ಸಹಾಯಧನ ಪಡೆಯಲು ರೈತರು ಅಧಿಕೃತ ಕೀಟನಾಶಕ ಮಾರಾಟ ಪರವಾನಗಿ ಹೊಂದಿರುವ ಮಾರಾಟಗಾರರಿಂದ ಮಾತ್ರ ಔಷಧಿಗಳನ್ನು ಖರೀದಿಸಬೇಕು. ಖರೀದಿಸಿದ ನಂತರ ಜಿಎಸ್‌ಟಿ ಬಿಲ್, ಪಹಣಿ (ಆರ್ ಟಿಸಿ), ಜಂಟಿ ಖಾತೆಯಿದ್ದಲ್ಲಿ ಉಳಿಕೆದಾರರ ಒಪ್ಪಿಗೆ ಪತ್ರ ಅಥವಾ ಜಿ.ಪಿ.ಎ., ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಹಾಗೂ ಎಫ್ ಐಡಿ ಸಂಖ್ಯೆಯೊಂದಿಗೆ ಆಗಸ್ಟ್ 7, 2026ರೊಳಗೆ ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಬೇಕು.
ಇದೇ ವೇಳೆ, ಕೇಂದ್ರ ಸರ್ಕಾರದ ಕೃಷಿ ಯಾಂತ್ರೀಕರಣ ಉಪಮಿಷನ್ ಯೋಜನೆಯಡಿ ಕೃಷಿ ಯಾಂತ್ರೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ವಿವಿಧ ಯಂತ್ರೋಪಕರಣಗಳ ಖರೀದಿಗೂ ಸಹಾಯಧನ ನೀಡಲಾಗುತ್ತಿದೆ. ಮದ್ದು ಸಿಂಪಡಿಸುವ ಯಂತ್ರ, ಮರ ಕತ್ತರಿಸುವ ಯಂತ್ರ, ಕಳೆ ಕತ್ತರಿಸುವ ಯಂತ್ರ, ಏಣಿ, ಕೈಗಾಡಿ, ಕಾಳುಮೆಣಸು ಗೆರೆ ಬಿಡಿಸುವ ಯಂತ್ರ, ಅಡಿಕೆ ಸುಲಿಯುವ ಯಂತ್ರ ಸೇರಿದಂತೆ ಹಲವು ಉಪಕರಣಗಳ ಖರೀದಿಗೆ ಸಾಮಾನ್ಯ ರೈತರಿಗೆ ಎಲ್–1 ದರದ ಶೇಕಡಾ 40ರಷ್ಟು ಹಾಗೂ ಮಹಿಳೆ, ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇಕಡಾ 50ರಷ್ಟು ಸಹಾಯಧನ ದೊರೆಯಲಿದೆ.
ಆಸಕ್ತ ರೈತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಸುಳ್ಯ ಇಲ್ಲಿ ಆಗಸ್ಟ್ 7, 2026ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಕಾರ್ಯದೇಶ ನೀಡಲಾಗುತ್ತದೆ. ಕಾರ್ಯದೇಶ ಪಡೆದ ನಂತರ ಮಾತ್ರ ಅನುಮೋದಿತ ಸಂಸ್ಥೆಗಳಿಂದ ಯಂತ್ರೋಪಕರಣಗಳನ್ನು ಖರೀದಿಸಬೇಕು. ಯಂತ್ರೋಪಕರಣಗಳ ಸಂಪೂರ್ಣ ಮೊತ್ತವನ್ನು NEFT ಅಥವಾ RTGS ಮೂಲಕ ಪಾವತಿಸಿ, ಪಾವತಿ ರಶೀದಿ, ಸಂಸ್ಥೆಯ ದೃಢೀಕರಣ ಪತ್ರ ಹಾಗೂ ಕಾರ್ಯದೇಶದ ನಂತರದ ದಿನಾಂಕದ ಖರೀದಿ ಬಿಲ್ಲುಗಳನ್ನು ಇಲಾಖೆಗೆ ಸಲ್ಲಿಸುವುದು ಕಡ್ಡಾಯವಾಗಿದೆ.
ಅರ್ಜಿಯೊಂದಿಗೆ FID ಸಂಖ್ಯೆ, ರಾಷ್ಟ್ರೀಕೃತ ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್, ಆಧಾರ್ ಕಾರ್ಡ್, ಪಹಣಿ (RTC), ಜಂಟಿ ಖಾತೆಯಿದ್ದರೆ ಒಪ್ಪಿಗೆ ಪತ್ರ ಅಥವಾ ಜಿ.ಪಿ.ಎ., ಸಣ್ಣ ಅಥವಾ ಅತಿ ಸಣ್ಣ ರೈತರ ಪ್ರಮಾಣಪತ್ರ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ರೈತರಿಗೆ ಜಾತಿ ಪ್ರಮಾಣಪತ್ರ ಸಲ್ಲಿಸಬೇಕು. ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸರ್ಕಾರದ ಸಹಾಯಧನ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ತೋಟಗಾರಿಕಾ ಇಲಾಖೆ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕಾ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
Attention areca nut growers: Government subsidy for purchase of pesticides – ತುಳುಟೈಮ್ಸ್
ಇದನ್ನೂ ಓದಿ :ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ರಾಜೀನಾಮೆ: ಧರ್ಮೇಂದ್ರ ಪ್ರಧಾನ್ ಹೇಳಿಕೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/5C4rFNGDf_w











