ಬೆಂಗಳೂರು: Tulu Times l ಬೆಂಗಳೂರು ಹತ್ತಿರದ ಸರ್ಕಾರಿ ಶಾಲೆಗಳ ಸಂಯೋಜನೆ ಹಾಗೂ ವಿಲೀನದ ಪರಿಣಾಮ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (ಕೆಪಿಎಸ್) ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ರಾಜ್ಯದ ಒಟ್ಟು 796 ಕೆಪಿಎಸ್‌ಗಳ ಪೈಕಿ 100ಕ್ಕೂ ಅಧಿಕ ಶಾಲೆಗಳಲ್ಲಿ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ವಿದ್ಯಾರ್ಥಿಗಳ ಹೆಚ್ಚಿದ ಹಾಜರಾತಿ ಹಾಗೂ ಶಾಲೆಗಳ ನಿರ್ವಹಣಾ ಅಗತ್ಯಗಳನ್ನು ಪರಿಗಣಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒಟ್ಟು ₹220 ಕೋಟಿ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ.
ಕೆಪಿಎಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಿಗೆ ಹೆಚ್ಚಿನ ನಿರ್ವಹಣಾ ವೆಚ್ಚ ನಿಗದಿಪಡಿಸಲಾಗಿದೆ. 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ನಿರ್ವಹಣೆಗಾಗಿ ಗರಿಷ್ಠ ₹12 ಲಕ್ಷದವರೆಗೆ ಅನುದಾನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ₹24.72 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.

ಸಾವಿರಾರು ವಿದ್ಯಾರ್ಥಿಗಳ ಹಾಜರಾತಿ ;
ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ ರಾಜ್ಯದ 104 ಕೆಪಿಎಸ್‌ಗಳಲ್ಲಿ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕೆಪಿಎಸ್ ಹಾಗೂ ಆದರ್ಶ ವಿದ್ಯಾಲಯಗಳ ಸಂಖ್ಯೆ 717ರಷ್ಟಿದೆ. ಅಲ್ಲದೆ, 96 ಸರ್ಕಾರಿ ಪ್ರೌಢಶಾಲೆಗಳಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದು, ಐದು ಸರ್ಕಾರಿ ಪ್ರೌಢಶಾಲೆಗಳಲ್ಲಿ 1,000ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.
2026-27ನೇ ಸಾಲಿನ ಶಾಲಾ-ಕಾಲೇಜುಗಳ ನಿರ್ವಹಣಾ ಅನುದಾನವನ್ನು ಆಯಾ ಶಾಲಾ ಮೇಲುಸ್ತುವಾರಿ ಸಮಿತಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಜಂಟಿ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲು ಅನುಮೋದಿಸಲಾಗಿದೆ. ಅನುದಾನವನ್ನು ಎರಡು ಹಂತಗಳಲ್ಲಿ, ಆಗಸ್ಟ್ ಮತ್ತು ನವೆಂಬರ್ ವೇಳೆಗೆ ಬಿಡುಗಡೆ ಮಾಡಲು ಸೂಚಿಸಲಾಗಿದೆ.
150ರಿಂದ 200 ವಿದ್ಯಾರ್ಥಿಗಳಿರುವ ಶಾಲೆಗಳಿಗೆ ₹2.50 ಲಕ್ಷ ಹಾಗೂ ಹೆಚ್ಚಿನ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. 32 ಆದರ್ಶ ವಿದ್ಯಾಲಯಗಳಿಗೆ ಕನಿಷ್ಠ ₹5 ಲಕ್ಷದಿಂದ ಗರಿಷ್ಠ ₹8 ಲಕ್ಷದವರೆಗೆ ಅನುದಾನ ನಿಗದಿಪಡಿಸಲಾಗಿದೆ.
ಮಕ್ಕಳಿಂದ ಸ್ವಚ್ಛತಾ ಕೆಲಸ ಮಾಡಿಸುವಂತಿಲ್ಲ ;
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕೆಲಸ ಮಾಡಿಸುವುದನ್ನು ಇಲಾಖೆ ಸ್ಪಷ್ಟವಾಗಿ ನಿಷೇಧಿಸಿದೆ. ಶಾಲಾ ಆವರಣದ ಸ್ವಚ್ಛತೆಗಾಗಿ ಅರೆಕಾಲಿಕ ಸಿಬ್ಬಂದಿ, ಸ್ವಸಹಾಯ ಸಂಘಗಳು ಅಥವಾ ಹೊರಗುತ್ತಿಗೆ ಸಿಬ್ಬಂದಿಯನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಶಾಲೆಗಳ ನಿರ್ವಹಣಾ ಅನುದಾನಕ್ಕೆ ‘ನಿರಂತರ’ ಆ್ಯಪ್‌ನಲ್ಲಿನ ಮುಖಚಹರೆ ಆಧಾರಿತ ಹಾಜರಾತಿಯನ್ನೇ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಶೂನ್ಯ ದಾಖಲಾತಿ ಹೊಂದಿರುವ, ಕೆಪಿಎಸ್ ಅಥವಾ ಪಿಎಂಶ್ರೀ ಶಾಲೆಗಳೊಂದಿಗೆ ಸಂಯೋಜಿತವಾಗಿರುವ ಹಾಗೂ ಯುಡೈಸ್‌ನಲ್ಲಿ ಅಗತ್ಯ ಮಾಹಿತಿಯನ್ನು ನವೀಕರಿಸದ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಬಾರದು ಎಂದು ಇಲಾಖೆ ಸೂಚಿಸಿದೆ.
Bumper grant for KPS: Rs 220 crore released – ತುಳುಟೈಮ್ಸ್
ಇದನ್ನೂ ಓದಿ :ಯಶೋಧಾ-ಕೃಷ್ಣ ವಿಷಯಾಧಾರಿತ ಛಾಯಾಗ್ರಹಣ ಸ್ಪರ್ಧೆ; ಪುಟಾಣಿಗಳ ಛಾಯಾಚಿತ್ರಗಳಿಗೆ ಬಹುಮಾನ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/f6_23OBB8ws











