ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಭಕ್ತರಿಗೆ ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಜಾರಿ

ಉಡುಪಿ : Tulu Times l ಉಡುಪಿ ಶ್ರೀ ಕೃಷ್ಣ ಮಠವು ಎಲ್ಲಾ ಭಕ್ತರಿಗೆ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಇದರಂತೆ ಪುರುಷ ಭಕ್ತರು ಮಠದ ಆವರಣ ಪ್ರವೇಶಿಸುವ ಮೊದಲು ಕಡ್ಡಾಯವಾಗಿ ಅಂಗಿ (ಶರ್ಟ್) ತೆಗೆದುಹಾಕಬೇಕು. ಈ ನಿರ್ದೇಶನವನ್ನು ಈಗಾಗಲ್ಲೇ ಮಠವು ಹೊರಡಿಸಿದ್ದು, ಸೋಮವಾರವಾದ ಜನವರಿ 19ರಿಂದ ಜಾರಿಗೆ ಬಂದಿದೆ.

ಪುನರ್‌ವಿಮರ್ಶಿತ ಮಾರ್ಗಸೂಚಿಗಳ ಪ್ರಕಾರ, ಮಠ ಪ್ರವೇಶಿಸುವ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನ್ವಯಿಸಲಾಗುತ್ತದೆ. ಮಹಿಳಾ ಭಕ್ತರು ಸಾದಾ ಹಾಗೂ ಸಾಂಪ್ರದಾಯಿಕ ಉಡುಪು ಧರಿಸಬೇಕು. ಜೀನ್ಸ್, ಟಿ-ಶರ್ಟ್, ಸ್ಲೀವ್‌ಲೆಸ್ ಉಡುಪುಗಳು ಅಥವಾ ಇತರೆ ಅಸಾಂಪ್ರದಾಯಿಕ ವಸ್ತ್ರ ಧರಿಸಿದ ಪುರುಷರು ಮತ್ತು ಮಹಿಳೆಯರಿಗೆ ಮಠ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ, ಪುರುಷ ಭಕ್ತರು ಮಠದ ಒಳಾಂಗಣ ಪ್ರವೇಶಿಸುವ ಮೊದಲು ಅಂಗಿ ತೆಗೆದುಹಾಕುವುದು ಕಡ್ಡಾಯವಾಗಿದೆ. ಇದುವರೆಗೆ ಈ ಪದ್ಧತಿ ಬೆಳಿಗ್ಗೆ 11 ಗಂಟೆಯೊಳಗೆ ನಡೆಯುವ ಮಹಾಪೂಜೆಗೆ ಹಾಜರಾಗುವ ಭಕ್ತರಿಗೆ ಮಾತ್ರ ಅನ್ವಯವಾಗುತ್ತಿತ್ತು. ಆದರೆ ಹೊಸ ನಿಯಮದಂತೆ, ಈಗ ಸಮಯವನ್ನು ಲೆಕ್ಕಿಸದೆ ದಿನಪೂರ್ತಿ ಈ ನಿಯಮ ಜಾರಿಯಾಗಿರುತ್ತದೆ.

ಶ್ರೀ ಕೃಷ್ಣ ಮಠದ ಪಾವಿತ್ರ್ಯ, ಶಿಸ್ತು ಮತ್ತು ಪುರಾತನ ಸಂಪ್ರದಾಯಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ. “ಶತಮಾನಗಳಿಂದ ನಡೆದುಕೊಂಡು ಬಂದಿರುವ ಮಠದ ಸಂಪ್ರದಾಯಗಳನ್ನು ಎಲ್ಲ ಭಕ್ತರೂ ಗೌರವಿಸಿ ಪಾಲಿಸಬೇಕು ಎಂಬುದೇ ನಮ್ಮ ಉದ್ದೇಶ,” ಎಂದು ಒಬ್ಬ ಅಧಿಕಾರಿ ಹೇಳಿದರು. ಪ್ರಸಿದ್ಧ ಈ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಮಠದ ಆಡಳಿತದೊಂದಿಗೆ ಸಹಕರಿಸಿ, ನಿಗದಿಪಡಿಸಿದ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ : ಪುತ್ತೂರು: ಗ್ಯಾಸ್ ಬಲೂನ್ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್..ಹೊತ್ತಿ ಉರಿದ ಕಾರು!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=qk6X-Kds6tY_xvVm

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page