ಬೆಂಗಳೂರು: Tulu Times | ಕಾಂಗ್ರೆಸ್ ಎಂದರೆ ಅದು ಸುಳ್ಳು ಸೃಷ್ಟಿಸಿ, ಹರಡುವ ಕೆಲಸದಲ್ಲಿ ತೊಡಗಿರುವ ಪಕ್ಷ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮನ್‍ರೇಗಾವನ್ನು 20 ವರ್ಷಗಳ ಹಿಂದೆ ಕೇವಲ ಕೂಲಿ ಕೆಲಸದ ಕಲ್ಪನೆ ಇಟ್ಟುಕೊಂಡು ಮಾಡಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಜನರಿಗೆ ಕೆಲಸ ಕೊಡುವುದರ ಜೊತೆಗೆ 2047ಕ್ಕೆ ವಿಕಸಿತ ಭಾರತದ ಜೊತೆಗೆ ವಿಕಸಿತ ಗ್ರಾಮಗಳೂ ಆಗಬೇಕಿದೆ ಎಂದು ವಿಶ್ಲೇಷಿಸಿದರು.
ಆ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲತೆ ಕಲ್ಪಿಸುವುದು, ಬಾಳಿಕೆ ಬರುವ ಆಸ್ತಿಗಳ ನಿರ್ಮಾಣ, ಗ್ರಾಮದ ಒಟ್ಟಾರೆ ಮೂಲಭೂತ ಸೌಕರ್ಯ ವೃದ್ಧಿಯಾಗಿ ಜನರಿಗೆ ಅನುಕೂಲ ಆಗಬೇಕೆಂಬ ಕಾರಣದಿಂದ ಇದು ಬದಲಾಗಿದೆ ಎಂದು ವಿವರಿಸಿದರು. ಮೊದಲು ಸ್ಥಳೀಯ ಅವಶ್ಯಕತೆ ಇದೆಯೋ ಇಲ್ಲವೋ ಕೆಲಸ ಮಾಡಲಾಗುತ್ತಿತ್ತು ಎಂದು ನುಡಿದರು. ಯುಪಿಎ ಕಾಲದಲ್ಲಿ ಇದಕ್ಕೆ 1.5 ಲಕ್ಷ ಕೋಟಿ ಖರ್ಚು ಮಾಡಿದ್ದರೆ, ಮೋದಿ ಕಾಲದಲ್ಲಿ ನಾವು 8.5 ಲಕ್ಷ ಕೋಟಿ ಖರ್ಚು ಮಾಡಿದ್ದೇವೆ ಎಂದು ವಿವರಿಸಿದರು. ಇದರಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ಸೋರಿಕೆ ಆಗುತ್ತಿತ್ತು ಎಂದು ಅವರು ಆರೋಪಿಸಿದರು. ಇವರು ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸಿ, ಜಾಬ್ ಕಾರ್ಡ್ ಸೃಷ್ಟಿಸಿ ಡೆಬಿಟ್ ಕಾರ್ಡ್ ಮೂಲಕ ಹಣ ಡ್ರಾ ಮಾಡುತ್ತಿದ್ದರು ಎಂದು ದೂರಿದರು.
ಸಿಎಜಿ ವರದಿ ಪ್ರಕಾರ 2013ರ ಕಾಂಗ್ರೆಸ್ ಕಾಲದಲ್ಲಿ 4.5 ಲಕ್ಷಕ್ಕೂ ಹೆಚ್ಚು ನಕಲಿ ಕಾರ್ಡ್ ಇದೆ ಎಂದು ತಿಳಿಸಿದ್ದರು. ನಾನು ದೆಹಲಿಯಿಂದ 100 ರೂ. ಕಳಿಸಿದರೆ, ಅದು ಹಳ್ಳಿಗೆ ಹೋಗುವಾಗ 15 ರೂ. ಆಗುತ್ತದೆ ಎಂದು ರಾಜೀವ್ ಗಾಂಧಿಯವರು ಅಧಿಕೃತವಾಗಿ ಹೇಳಿದ್ದರು. ಅದನ್ನು ನಿಲ್ಲಿಸಲು ಕಳೆದ 10 ವರ್ಷಗಳಿಂದ ಅನೇಕ ಪ್ರಯೋಗಗಳಾಗಿವೆ. ಇದೂ ಅದರಲ್ಲಿ ಒಂದು. ಕಾಂಗ್ರೆಸ್ ಪಾರ್ಟಿಗೆ ಇದು ಬೇಡವಾಗಿದೆ ಎಂದು ಆರೋಪಿಸಿದರು.
ತನ್ನ ಮಧ್ಯವರ್ತಿಗಳಿಗೆ, ವಿಶೇಷವಾಗಿ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ತನ್ನ ಮಧ್ಯವರ್ತಿಗಳ ಜೇಬು ತುಂಬುವ ಕೆಲಸ ಮಾಡಬೇಕಾಗಿದೆ. ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.
Congress is creating and spreading lies: Pralhad Joshi – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











