ಕರ್ನಾಟಕ : Tulu Times l ಕರ್ನಾಟಕ ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಭರ್ಜರಿ ಸಿದ್ಧತೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳ ಹಾಜರಾತಿ, ಕಲಿಕಾ ಗುಣಮಟ್ಟ ಹಾಗೂ ದಾಖಲಾತಿ ಹೆಚ್ಚಿಸಲು ಶಾಲಾ ಶಿಕ್ಷಣ ಇಲಾಖೆ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಶಿಕ್ಷಣ ಇಲಾಖೆಯ ಹೊಸ ಮಾರ್ಗಸೂಚಿಗಳ ಪ್ರಕಾರ, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಜೂನ್ 1ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ.
ಈ ಬಾರಿ ಪ್ರಮುಖ ಬದಲಾವಣೆಯಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಎಐ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ತಂತ್ರಜ್ಞಾನ ಆಧಾರಿತ ಈ ವ್ಯವಸ್ಥೆಯ ಮೂಲಕ ಶಾಲೆಗಳಲ್ಲಿ ಹಾಜರಾತಿ ನಿರ್ವಹಣೆಯನ್ನು ಬಲಪಡಿಸಿ, ಜವಾಬ್ದಾರಿತನ ಹೆಚ್ಚಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ. ಶಾಲೆಗಳು ಪುನರಾರಂಭವಾಗುವ ಮೊದಲು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲು, ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಸಹಾಯಕ ಶಿಕ್ಷಕರು ಮೇ 29ರಂದೇ ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಮಳೆಯ ಹಿನ್ನಲೆಯಲ್ಲಿ ಶಾಲಾ ಆವರಣ ಮತ್ತು ಮೂಲಸೌಕರ್ಯಗಳನ್ನು ಸುರಕ್ಷಿತವಾಗಿಡುವ ಜೊತೆಗೆ, ಶಾಲಾ ಆರಂಭೋತ್ಸವ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಇಲಾಖೆ ಆದೇಶಿಸಿದೆ. ಹೊಸ ಶೈಕ್ಷಣಿಕ ವರ್ಷದ ಮೊದಲ ದಿನದಿಂದಲೇ ಪಾಠ, ತರಗತಿಗಳು ಮತ್ತು ಬಿಸಿಯೂಟ ಯೋಜನೆ ಆರಂಭವಾಗಲಿದೆ. ಜೊತೆಗೆ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಗೆ ವಿಶೇಷ ಒತ್ತು ನೀಡಲಾಗುತ್ತಿದೆ.
ವಿದ್ಯಾರ್ಥಿಗಳ ಕಲಿಕೆಯಲ್ಲಿ ಉಂಟಾಗಿರುವ ಕೊರತೆಯನ್ನು ನಿವಾರಿಸಲು ಸೇತುಬಂಧ ಶಿಕ್ಷಣ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ. ಹೊಸ ಪಠ್ಯಕ್ರಮಕ್ಕೆ ಹೋಗುವ ಮೊದಲು ಮೂಲಭೂತ ಕಲಿಕಾ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿ ದಾಖಲಾತಿ ಹೆಚ್ಚಿಸಲು ಶಾಲೆಗಳಿಗೆ ದ್ವಿಭಾಷಾ ಬೋಧನೆ ಅಳವಡಿಸಿಕೊಳ್ಳುವಂತೆ ಇಲಾಖೆ ಪ್ರೋತ್ಸಾಹಿಸಿದೆ. ಮನೆಮನೆಗೆ ತೆರಳಿ ಜಾಗೃತಿ ಅಭಿಯಾನ ನಡೆಸುವ ಮೂಲಕ ಪೋಷಕರನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವ ಯೋಜನೆಯೂ ರೂಪಿಸಲಾಗಿದೆ. ದ್ವಿಭಾಷಾ ಬೋಧನೆಯಿಂದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗುವುದರ ಜೊತೆಗೆ, ಪೋಷಕರ ವಿಶ್ವಾಸವೂ ಹೆಚ್ಚಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಶಾಲೆಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಲು ಇಲಾಖೆ ನಿರ್ಧರಿಸಿದೆ.
School starts from June 1: AI attendance, bilingual teaching implemented – ತುಳು ಟೈಮ್ಸ್
ಇದನ್ನೂ ಓದಿ : ಶಾಲಾ ವಾಹನದಲ್ಲಿ ಬಾಲಕಿಯರ ಸುರಕ್ಷತೆಗೆ ಮಹಿಳಾ ಸಿಬ್ಬಂದಿ ಕಡ್ಡಾಯ ಮಾಡಿದ ಕೇರಳ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=NM0tBe15Cbzi85Bp











