ಬ್ರೇಕಿಂಗ್ ನ್ಯೂಸ್
ಕರ್ನಾಟಕದೇಶ

Montha Cyclone: ಆಂಧ್ರ, ಒಡಿಶಾಗೆ ಹೈ ಅಲರ್ಟ್ – ಶಿಕ್ಷಣ ಸಂಸ್ಥೆಗಳಿಗೆ 3 ದಿನ ರಜೆ

Montha Cyclone: ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತವು ಇದೀಗ ಮೊಂಥಾ ಚಂಡಮಾರುತವಾಗಿ ಪರಿವರ್ತಿತವಾಗಿದೆ. ಸೋಮವಾರ ಆಂಧ್ರಪ್ರದೇಶದ ಕರಾವಳಿಯ ಮೇಲೆ ಅಪ್ಪಳಿಸಿದೆ. ನೆಲ್ಲೂರಿನಿಂದ ಶ್ರೀಕಾಕುಳಂವರೆಗಿನ ಆಂಧ್ರಪ್ರದೇಶದ ಕರಾವಳಿಯಲ್ಲಿ 2 ರಿಂದ 4.7 ಮೀಟರ್ ಎತ್ತರದ ಸಮುದ್ರ ಅಲೆಗಳು ಏಳಲಿವೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ಕೊಟ್ಟಿದೆ.

ಮೊಂಥಾ ಚಂಡಮಾರುತವು ಇಂದು ಸಂಜೆ ವೇಳೆಗೆ ಇನ್ನುಷ್ಟು ಪ್ರಬಲಗೊಳ್ಳುವ ನಿರೀಕ್ಷೆಯಿದೆ. ಮೋಂಥಾ ಚಂಡಮಾರುತ ಸಂಜೆಯ ವೇಳೆಗೆ ಅದು ಇನ್ನಷ್ಟು ತೀವ್ರ ಸ್ವರೂಪ ಪಡೆದು ಕಾಕಿನಾಡದ ಸಮೀಪ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣದ ಮಧ್ಯೆ ಹಾದು ಹೋಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತ ಹಿನ್ನೆಲೆಯಲ್ಲಿ ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳಿಗೆ 3 ದಿನ ರಜೆ ಘೋಷಿಸಲಾಗಿದೆ. ಜೊತೆಗೆ ಮುಂದಿನ 3 ದಿನಗಳ ಅವಧಿಯಲ್ಲಿ ಉಭಯ ರಾಜ್ಯಗಳಲ್ಲಿ ರೈಲು ಮತ್ತು ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಲಿದೆ. ಈ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ. ಚಂಡಮಾರುತದ ಬಗ್ಗೆ ಪ್ರಧಾನಿಗಳ ಕಚೇರಿಗೆ ನಿರಂತರ ಮಾಹಿತಿ ನೀಡುವ ಜವಾಬ್ದಾರಿಯನ್ನು ಐಟಿ ಸಚಿವ ನಾರಾ ಲೋಕೇಶ್‌ ಅವರಿಗೆ ನೀಡಲಾಗಿದೆ.

ಚಂಡಮಾರುತದ ನೇರ ಪರಿಣಾಮ ಸಾಧ್ಯತೆ ಇರುವ ಐದು ರಾಜ್ಯಗಳಾದ ಆಂಧ್ರಪ್ರದೇಶ, ಒಡಿಶಾ, ಪುದುಚೇರಿ, ತಮಿಳುನಾಡು ಮತ್ತು ಛತ್ತೀಸ್‌ಗಢಗಳಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (NDRF) 22 ತಂಡಗಳನ್ನು ಸರ್ಕಾರ ನಿಯೋಜಿಸಿದೆ. ಕರ್ನಾಟಕದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹೇಳಲಾಗಿದೆ.

ಆಂಧ್ರಪ್ರದೇಶದ 1,419 ಹಳ್ಳಿಗಳು ಮತ್ತು 44 ಪಟ್ಟಣಗಳ ಮೇಲೆ ಸೈಕ್ಲೋನ್‌ ಪರಿಣಾಮ ಬೀರುವ ನಿರೀಕ್ಷೆಯಿದೆ. ಹಾಗಾಗಿ ನಿವಾಸಿಗಳು ಮನೆಯೊಳಗೆ ಇರುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರು ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.

ಮೊಂಥಾ ಎಂದರೆ ಥಾಯ್ ಭಾಷೆಯಲ್ಲಿ ಪರಿಮಳ ಸೂಸುವ ಹೂವು ಎಂದರ್ಥ. ಚಂಡಮಾರುತವು ಪೂರ್ವ ಕರಾವಳಿ ಕಡೆಗೆ ಗಂಟೆಗೆ 110 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ.

ಮೋಂಥಾ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​, 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಬೆಳಗ್ಗಿನಿಂದಲೇ ಹನಿ ಹನಿ ಮಳೆಯಾಗುತ್ತಿದೆ.

ಇದನ್ನೂ ಓದಿ: Uppinangady: ಹಾಡಹಗಲೇ ಅಂಗಡಿಗೆ ನುಗ್ಗಿ ಐದು ಲಕ್ಷ ದೋಚಿದ ಕಳ್ಳರು

================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess  

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 172

You cannot copy content of this page