RSS BAN: ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ಬ್ಯಾನ್ ವಿವಾದ ಭುಗಿಲೆದ್ದಿದೆ. ಸಿದ್ದರಾಮಯ್ಯ ಸರ್ಕಾರ ಆರ್‌ಎಸ್‌ಎಸ್ ಚಟುವಟಿಕೆಗೆ ಬ್ರೇಕ್ ಹಾಕಲು ಆದೇಶ ಹೊರಡಿಸಿದ್ದಾರೆ. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಬ್ಯಾನ್ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ನಂತರ ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿದೆ. ಈಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡೋದನ್ನು ನಿಷೇಧಿಸಿ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಾರ್ವಜನಿಕ ರಸ್ತೆಗಳು, ಸರ್ಕಾರಿ ಆಸ್ತಿಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಸರ್ಕಾರವು ತಂದಿರುವ ಹೊಸ ನಿಯಮವನ್ನು ಉಲ್ಲೇಖಿಸಿದ ಯತ್ನಾಳ್, ಸಮಾನತೆ ಮತ್ತು ತಟಸ್ಥತೆಯ ತತ್ವವನ್ನು ಸಮಾಜದ ಎಲ್ಲ ವರ್ಗಗಳಿಗೂ ಸಮಾನವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಮಾಜ್ ನಿಷೇಧಕ್ಕೆ ಯತ್ನಾಳ್ ಪ್ರಮುಖ ಕಾರಣಗಳು:
ಸಾರ್ವಜನಿಕರಿಗೆ ತೊಂದರೆ: ಪೂರ್ವಾನುಮತಿ ಇಲ್ಲದೆ ರಸ್ತೆಗಳು, ಪಾದಚಾರಿ ಮಾರ್ಗಗಳು ಮತ್ತು ಸರ್ಕಾರಿ ಆವರಣಗಳಲ್ಲಿ ನಮಾಜ್ ಮಾಡುವುದರಿಂದ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗುತ್ತದೆ.
ಸಂವಿಧಾನದ ಹಕ್ಕಿನ ಉಲ್ಲಂಘನೆ: ಇದು ಪಾದಚಾರಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ ಮತ್ತು ಸಂವಿಧಾನದ ವಿಧಿ 19 ಮತ್ತು 21 ರ ಅಡಿಯಲ್ಲಿ ನಾಗರಿಕರಿಗೆ ನೀಡಲಾಗಿರುವ ಮುಕ್ತ ಸಂಚಾರ ಮತ್ತು ಸುರಕ್ಷತೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ.
ತಾರತಮ್ಯದ ಆಡಳಿತ: ಒಂದು ಕಡೆ ಖಾಸಗಿ ಸಂಸ್ಥೆಗಳ ಚಟುವಟಿಕೆಗಳನ್ನು ನಿರ್ಬಂಧಿಸಿ, ಮತ್ತೊಂದೆಡೆ ಅನುಮತಿ ಇಲ್ಲದೆ ಸರ್ಕಾರಿ ಕಚೇರಿಗಳು ಅಥವಾ ಸರ್ಕಾರಿ ನೆರವಿನ ಸಂಸ್ಥೆಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡುವುದು ಆಯ್ದ ಜಾರಿ ಮಾಡಿದಂತೆ ಆಗುತ್ತದೆ. ಇದು ಆಡಳಿತದ ವಿಶ್ವಾಸಾರ್ಹತೆಯನ್ನು ಕುಂದಿಸುತ್ತದೆ ಎಂದು ಯತ್ನಾಳ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
https://x.com/BasanagoudaBJP/status/1979102508816429269
ಅನುಮತಿ ಪಡೆದುಕೊಂಡು ನಮಾಜ್ ಮಾಡ್ತಾರಾ? – ಕೆ.ಎನ್.ರಾಜಣ್ಣ ಪ್ರಶ್ನೆ
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ , ಮುಸ್ಲಿಮರು ಈದ್ಗಾ ಮೈದಾನ ತುಂಬಿ ರಸ್ತೆಯಲ್ಲಿ ನಮಾಜು ಮಾಡುತ್ತಾರೆ. ಅವರೆಲ್ಲಾ ಅನುಮತಿ ಪಡೆದುಕೊಂಡೇ ನಮಾಜ್ ಮಾಡುತ್ತಾರಾ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಪರ್ಮಿಷನ್ ಕೊಡಿ ಅಂತಾ ಮುಸ್ಲಿಮರು ಬರುವುದಿಲ್ಲ ಅಥವಾ ಪರ್ಮಿಷನ್ ತೆಗೆದುಕೊಳ್ಳಿ ಅಂತ ನಾವು ಕೇಳುವುದಿಲ್ಲ. ಹಾಗಾಗಿ ಸರ್ಕಾರ ಜಾರಿ ಮಾಡಲು ಸಾಧ್ಯವಾಗುವಂತಹ ಕಾನೂನನ್ನು ಮಾತ್ರ ತರಬೇಕು. ಅದನ್ನು ಬಿಟ್ಟು ಜಾರಿ ಮಾಡಲಾಗದ ಕಾನೂನು ತಂದರೆ ಪುಸ್ತಕದಲ್ಲಿ ಇರಬೇಕಷ್ಟೆ ಎಂದು ವ್ಯಂಗ್ಯವಾಡಿದರು. ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಆಗಲಿ ಅಥವಾ ಬೇರೆ ಯಾವುದೇ ಸಂಘಟನೆಯಾಗಲಿ ಅನುಮತಿ ಪಡೆದು ಕಾರ್ಯಕ್ರಮ ಮಾಡಿ ಅಂತಾ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿದೆ. ಅದು ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ ಅನ್ನುವುದನ್ನು ನೋಡೋಣ ಎಂದರು.
ಎಲ್ಲಾ ಸಂಘಟನೆಗಳಿಗೆ ಅನ್ವಯಿಸುತ್ತದೆ; ಸಚಿವ ಎಂ. ಸಿ. ಸುಧಾಕರ್
ಸ್ವೇಚ್ಛಾಚಾರದ ನಡುವಳಿಕೆಗಳಿಗೆ ಕಡಿವಾಣ ಹಾಗೂ ಎಲ್ಲರಲ್ಲೂ ಶಿಸ್ತಿರಲಿ ಎಂಬ ಕಾರಣಕ್ಕೆ ನಿರ್ಬಂಧದ ಆದೇಶವನ್ನು ಮಾಡಲಾಗಿದೆ. ಇದು ಆರ್‌ಎಸ್ಎಸ್‌ಗೆ ಮಾತ್ರವಲ್ಲ ಎಲ್ಲ ಸಂಘಟನೆಗಳಿಗೆ ಅನ್ವಯಿಸುತ್ತದೆ. ಪರವಾನಗಿ ತೆಗೆದುಕೊಂಡು ಯಾವುದೇ ಕಾರ್ಯಚಟುವಟಿಕೆ ಮಾಡಲು ಸಮಸ್ಯೆಗಳಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್ ಅವರು ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಸಾರ್ವಜನಿಕ ಸ್ಥಳದಲ್ಲಿ ಎಲ್ಲ ಜಾತಿ ಧರ್ಮದ ಜನರು ಇರುತ್ತಾರೆ. ಕೆಲವು ಚಟುವಟಿಕೆಗಳಿಗೆ ಜನರಿಂದ ವಿರೋಧ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ಕಾರ್ಯಕ್ರಮ ಮಾಡಲು ಅನುಮತಿ ತೆಗೆದುಕೊಳ್ಳಬೇಕು ಎಂದು ಸರ್ಕಾರ ಆದೇಶಿಸಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಬೇರೆ ಬೇರೆ ರಾಜ್ಯಗಳಲ್ಲಿ ಆರ್‌ಎಸ್ಎಸ್ ಮೇಲೆ ಇಂತಹದ್ದೇ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Puttur: ಟ್ರಾಫಿಕ್ ಪೊಲೀಸರ ದುರ್ವರ್ತನೆ – ಇಬ್ಬರು ಅಮಾನತು
=========================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











