Kadaba: ಮನೆಯ ಹೊರಗಡೆ ಮಹಿಳೆಯೊಬ್ಬರು ರಾತ್ರಿ ಮಲಗಿದ್ದ ವೇಳೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದಿಢೀರ್ ಆಗಿ ಬಂದ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ, ಹಲ್ಲೆಗೈದು ಜಾತಿ ನಿಂದನೆಗೈದ ಆರೋಪದಲ್ಲಿ ಕಡಬ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಐತ್ತೂರು ಗ್ರಾಮದ ಉಮೇಶ್ ಗೌಡ ಬಂಧಿತ ಆರೋಪಿ. ಈತ ನ. 13ರ ರಾತ್ರಿ ಮಹಿಳೆಯು ಮನೆಯ ಹೊರಭಾಗದ ಕೊಟ್ಟಿಗೆಯಲ್ಲಿ ಮಲಗಿದ್ದ ವೇಳೆ ಏಕಾಏಕಿ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಆ ವೇಳೆ ಮಹಿಳೆ ಬೊಬ್ಬೆ ಹೊಡೆದಿದ್ದು ಮನೆ ಮಂದಿ ಎಚ್ಚರಗೊಂಡಿದ್ದಾರೆ. ಈ ವೇಳೆ ಮನೆಯೊಳಗೆ ಇದ್ದ ಮಹಿಳೆಯ ಗಂಡ, ಮಕ್ಕಳು ಓಡಿ ಬಂದಿದ್ದಾರೆ. ಈ ವೇಳೆ ಆರೋಪಿತ ಮನೆ ಮಂದಿಗೆ ಹಲ್ಲೆಗೈದು ಪರಾರಿಯಾಗಿದ್ದ. ಈ ವೇಳೆ ಮಹಿಳೆಗೆ ಜಾತಿ ನಿಂದನೆಯೂ ಮಾಡಿದ್ದ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ನ 16ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಉಮೇಶ್ ಗೌಡ ಈ ಹಿಂದೆ ಪೋಕ್ಸೋ ಪ್ರಕರಣದ ಆರೋಪಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಆರೋಪಿಯ ವಿರುದ್ದ ಭಾರತೀಯ ನ್ಯಾಯ ಸಂಹಿತೆ ಮತ್ತು ಅಟ್ರಾಸಿಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿತ್ತು.
ನ.14 ರಂದು ಕೇಸು ದಾಖಲಾದ ಹಿನ್ನೆಲೆ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲವೆಂದು ಭೀಮ್ ಆರ್ಮಿ ಸಂಘಟನೆಯ ಪ್ರಮುಖರು ಆಕ್ರೋಶ ಹೊರಹಾಕಿದ್ದರು. ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: Bengaluru: ಲೈಂಗಿಕ ಕಿರುಕುಳ ಆರೋಪ ಕೇಸ್; ದಾಖಲೆ ನೀಡುವಂತೆ ನಟಿಗೆ ನೋಟಿಸ್!
=====================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











