ಮಂಗಳೂರು: Tulu Times l ಹೃದಯಾಘಾತದಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ’ ಯೋಜನೆ ಕರಾವಳಿ ಭಾಗದಲ್ಲಿ ಸಾವಿರಾರು ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು 12,886 ಹೃದಯ ರೋಗಿಗಳಿಗೆ ತುರ್ತು ಚಿಕಿತ್ಸೆ ದೊರೆತು ಹೊಸ ಬದುಕು ದೊರೆತಿದೆ.
ಅಧಿಕೃತ ಮಾಹಿತಿಯ ಪ್ರಕಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 3,759 ಮಂದಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರೆ, 9,127 ಮಂದಿ ಇತರೆ ಹೃದಯಾಘಾತ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರಿಗೆ ಸಮೀಪದ ತಾಲೂಕು ಆಸ್ಪತ್ರೆಗಳಲ್ಲಿ ತಕ್ಷಣ ಚಿಕಿತ್ಸೆ ದೊರೆತ ಪರಿಣಾಮ ಜೀವ ಉಳಿಯಲು ಸಾಧ್ಯವಾಗಿದೆ.

ಕಳೆದ ಎರಡೂವರೆ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಯಲ್ಲಿ 5,460 ಮಂದಿಗೆ ಹೃದಯ ತಪಾಸಣೆ ನಡೆಸಲಾಗಿದೆ. ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ 1,501 ಮಂದಿ, ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ 1,449 ಮಂದಿ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ 703 ಮಂದಿ, ಖಾಸಗಿ ಆಸ್ಪತ್ರೆಗಳಲ್ಲಿ 2,166 ಮಂದಿ, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ 868 ಮಂದಿ, ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ 295 ಮಂದಿ ಹಾಗೂ ಕುಂದಾಪುರದಲ್ಲಿ 444 ಮಂದಿಗೆ ತಪಾಸಣೆ ನಡೆಸಲಾಗಿದೆ.
ಎದೆನೋವು, ಎಡ ದವಡೆಯಲ್ಲಿ ನೋವು, ಎಡಗೈ ನೋವು, ಅತಿಯಾದ ಬೆವರು, ಎದೆ ಮಧ್ಯಭಾಗದಲ್ಲಿ ಒತ್ತಡ ಅಥವಾ ಭಾರವಾದ ಅನುಭವ, ಕುಸಿದು ಬೀಳುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಸಮೀಪದ ಸರ್ಕಾರಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಆಸ್ಪತ್ರೆಯಲ್ಲಿ ಇಸಿಜಿ ಪರೀಕ್ಷೆ ನಡೆಸಿದ ಬಳಿಕ ವರದಿಯನ್ನು ಕೆಲವೇ ನಿಮಿಷಗಳಲ್ಲಿ ಹಬ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಗಂಭೀರ ಸಮಸ್ಯೆ ಪತ್ತೆಯಾದರೆ ತಕ್ಷಣವೇ ದುಬಾರಿ ಬೆಲೆಯ ‘ಟೆನೆಕ್ಟ್ ಪ್ಲಸ್’ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುತ್ತದೆ. ನಂತರ ಮತ್ತೊಮ್ಮೆ ಇಸಿಜಿ ನಡೆಸಿ ರೋಗಿಯ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಅಗತ್ಯವಿದ್ದರೆ ಸ್ಟೆಂಟ್ ಅಳವಡಿಕೆ ಸೇರಿದಂತೆ ಮುಂದಿನ ಚಿಕಿತ್ಸೆಯನ್ನೂ ಉಚಿತವಾಗಿ ಒದಗಿಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ, ಬಂಟ್ವಾಳ, ಬೆಳ್ತಂಗಡಿ ತಾಲೂಕು ಆಸ್ಪತ್ರೆಗಳು ಹಾಗೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಸ್ಪೋಕ್ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಶೀಘ್ರದಲ್ಲೇ ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿಯೂ ಯೋಜನೆ ಜಾರಿಯಾಗಲಿದೆ.
ಉಡುಪಿ ಜಿಲ್ಲೆಯಲ್ಲಿ ಕಾರ್ಕಳ, ಕುಂದಾಪುರ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಗಳು ಸ್ಪೋಕ್ ಕೇಂದ್ರಗಳಾಗಿವೆ. ಎರಡೂ ಜಿಲ್ಲೆಗಳಿಗೆ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಹಬ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಕ್ಯಾಥ್ ಲ್ಯಾಬ್ ಸೌಲಭ್ಯ ಇರುವುದರಿಂದ ಹೆಚ್ಚಿನ ಚಿಕಿತ್ಸೆಯನ್ನು ವೆನ್ಲಾಕ್ ಆಸ್ಪತ್ರೆಯಲ್ಲೇ ನೀಡಲಾಗುತ್ತಿದೆ.
ತೀವ್ರ ಹೃದಯಾಘಾತದ ಸಂದರ್ಭದಲ್ಲಿ ನೀಡಲಾಗುವ ಟೆನೆಕ್ಟ್ ಪ್ಲಸ್ ಚುಚ್ಚುಮದ್ದು ಖಾಸಗಿ ಆಸ್ಪತ್ರೆಗಳಲ್ಲಿ ₹30,000 ರಿಂದ ₹45,000 ವರೆಗೆ ವೆಚ್ಚವಾಗುತ್ತದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಔಷಧಿಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ 62 ಮಂದಿ ಈ ಚುಚ್ಚುಮದ್ದಿನ ಪ್ರಯೋಜನ ಪಡೆದಿದ್ದಾರೆ.
ಹೃದಯಾಘಾತದ ನಂತರದ ಮೊದಲ ಒಂದು ಗಂಟೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ‘ಗೋಲ್ಡನ್ ಅವರ್’ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಚಿಕಿತ್ಸೆ ದೊರೆತರೆ ಜೀವ ಉಳಿಯುವ ಸಾಧ್ಯತೆ ಹೆಚ್ಚು. ಈ ಕಾರಣದಿಂದಲೇ ನಟ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ 2023ರ ಮಾರ್ಚ್‌ನಲ್ಲಿ ಯೋಜನೆಯ ಮೊದಲ ಹಂತ ಆರಂಭಿಸಲಾಯಿತು. ನಂತರ 2024ರ ಮಾರ್ಚ್‌ನಲ್ಲಿ ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರ ಪ್ರಕಾರ, ಹೃದಯಾಘಾತದಂತಹ ತುರ್ತು ಪರಿಸ್ಥಿತಿಗಳಲ್ಲಿ ಜನರಿಗೆ ಸಮಯೋಚಿತ ಮತ್ತು ಉಚಿತ ಚಿಕಿತ್ಸೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯೋಜನೆಯಿಂದ ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಈ ಯೋಜನೆ ಗ್ರಾಮೀಣ ಹಾಗೂ ದೂರದ ಪ್ರದೇಶಗಳ ಜನರಿಗೆ ಹೃದಯ ಚಿಕಿತ್ಸೆಯನ್ನು ಸುಲಭವಾಗಿ ಮತ್ತು ಉಚಿತವಾಗಿ ತಲುಪಿಸುವ ಮೂಲಕ ರಾಜ್ಯದ ಮಹತ್ವದ ಆರೋಗ್ಯ ಯೋಜನೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
‘Puneeth Rajkumar Hrudayajyoti’ project saves lives of 12,886 heart patients in the coastal areas – ತುಳುಟೈಮ್ಸ್
ಇದನ್ನೂ ಓದಿ :ಬೆಂಗಳೂರಿಗೆ 26 ಸಾವಿರ ಕೋಟಿ : ಪ್ರಧಾನಿ ಮೋದಿ ಮುಂದೆ 18 ಪ್ರಮುಖ ಬೇಡಿಕೆಗಳಿಟ್ಟ ಡಿ.ಕೆ. ಶಿವಕುಮಾರ್
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=p1IlTXir1jvJ0CMA











