ಎಐ : Tulu Times l ತೆಲುಗು ನಟ ನಾಗಚೈತನ್ಯ ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ಮತ್ತು ತಮ್ಮ ಹೆಸರು, ಚಿತ್ರ ಹಾಗೂ ವ್ಯಕ್ತಿತ್ವವನ್ನು ಅನುಮತಿಯಿಲ್ಲದೆ ಆನ್‌ಲೈನ್‌ನಲ್ಲಿ ಬಳಸುತ್ತಿರುವುದನ್ನು ತಡೆಯಲು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ನಟನ ಪರ ವಕೀಲರು ಸಲ್ಲಿಸಿರುವ ಅರ್ಜಿಯಲ್ಲಿ, ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾಗಿರುವ ಅವಹೇಳನಕಾರಿ ವಿಷಯಗಳು, ಮಾರ್ಫ್ ಮಾಡಲಾದ ವೀಡಿಯೊಗಳು ಹಾಗೂ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಮಾನಹಾನಿಕರ ಪೋಸ್ಟ್‌ಗಳ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. ಅರ್ಜಿಯ ಪ್ರಕಾರ, ಕೆಲವು ವೆಬ್‌ಸೈಟ್‌ಗಳು ನಾಗ ಚೈತನ್ಯ ಅವರ ಹೆಸರನ್ನು ಅವಹೇಳನಕಾರಿ ಪದಗಳೊಂದಿಗೆ ಜೋಡಿಸಿ ಆನ್‌ಲೈನ್ ಟ್ರಾಫಿಕ್ ಸೆಳೆಯಲು ಬಳಸುತ್ತಿವೆ ಎಂದು ಆರೋಪಿಸಲಾಗಿದೆ. ನಟನಿಗೆ ಸಂಬಂಧಿಸಿದ ಆಕ್ಷೇಪಾರ್ಹ ವಿಷಯಗಳು ಡಿಜಿಟಲ್ ವೇದಿಕೆಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ನಟನ ಪರವಾಗಿ ಹಾಜರಾದ ಹಿರಿಯ ವಕೀಲರು, ಎಐ ತಂತ್ರಜ್ಞಾನ ಹಾಗೂ ಡಿಜಿಟಲ್ ತಂತ್ರಜ್ಞಾನದಿಂದ ತಿರುಚಲಾದ ವೀಡಿಯೊಗಳ ಮೂಲಕ ನಾಗ ಚೈತನ್ಯರನ್ನು ಆಕ್ಷೇಪಾರ್ಹ ಸಂದರ್ಭಗಳಲ್ಲಿ ತೋರಿಸಲಾಗುತ್ತಿದೆ ಎಂದು ವಾದಿಸಿದರು. ಅಲ್ಲದೆ, ನಾಗ ಚೈತನ್ಯ ಅವರ ಮಾಜಿ ಪತ್ನಿ ಸಮಂತಾ ಪ್ರಭು ಅವರಿಗೆ ಅವರು ಮೋಸ ಮಾಡಿದ್ದಾರೆ ಹಾಗೂ ಅವರ ವೃತ್ತಿಜೀವನಕ್ಕೆ ಹಾನಿ ಉಂಟುಮಾಡಿದ್ದಾರೆ ಎಂಬ ರೀತಿಯ ವಿಷಯಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಇದು ಕೇವಲ ಟ್ರೋಲಿಂಗ್ ಅಲ್ಲ. ಇದನ್ನು ನ್ಯಾಯಸಮ್ಮತ ಟೀಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ, ಎಂದು ನಟನ ಪರ ವಕೀಲರು ವಾದಿಸಿರುವುದು ವರದಿಯಾಗಿದೆ ಇಲ.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್, ಸಾರ್ವಜನಿಕ ವ್ಯಕ್ತಿಗಳು ಹೆಚ್ಚಿನ ಸಾರ್ವಜನಿಕ ಪರಿಶೀಲನೆಗೆ ಒಳಗಾಗುವುದು ಸಹಜವಾದರೂ ಅದಕ್ಕೂ ಕೆಲವು ಮಿತಿಗಳಿವೆ ಎಂದು ಅಭಿಪ್ರಾಯಪಟ್ಟರು. ಇದಲ್ಲದೆ, ನಾಗ ಚೈತನ್ಯ ಅವರ ಚಿತ್ರ ಮತ್ತು ವ್ಯಕ್ತಿತ್ವವನ್ನು ಬಳಸಿಕೊಂಡು ಅನುಮತಿಯಿಲ್ಲದೆ ವಾಣಿಜ್ಯ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಎಐ ಸಾಧನಗಳು, ಡೀಪ್‌ಫೇಕ್ ತಂತ್ರಜ್ಞಾನ, ಧ್ವನಿ ನಕಲು ಹಾಗೂ ಇತರ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನಟನ ಅನುಮತಿಯಿಲ್ಲದೆ ನಕಲಿ ಆಡಿಯೊ-ವೀಡಿಯೊ ವಿಷಯಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಇಂತಹ ವಿಷಯಗಳು ನಟನ ಗೌರವ, ಖ್ಯಾತಿ, ಖಾಸಗಿತನ ಹಾಗೂ ಸಾರ್ವಜನಿಕ ಪ್ರತಿಷ್ಠೆಗೆ ಹಾನಿ ಉಂಟುಮಾಡುತ್ತಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಕೆಲವು ಮಾನಹಾನಿಕರ ಯೂಟ್ಯೂಬ್ ವೀಡಿಯೊಗಳನ್ನು ನ್ಯಾಯಾಲಯಕ್ಕೆ ತೋರಿಸಲಾಗಿದ್ದು, ಕೆಲವು ಲಿಂಕ್‌ಗಳನ್ನು ಈಗಾಗಲೇ ತೆಗೆದುಹಾಕಲಾಗಿದೆ. ಆದರೆ ಕೆಲವು ಸಂಬಂಧಿತ ಸುದ್ದಿಯ ಲಿಂಕ್‌ಗಳು ಇನ್ನೂ ಸಕ್ರಿಯವಾಗಿವೆ ಎಂದು ವಕೀಲರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು, ಶೀಘ್ರದಲ್ಲೇ ಮಧ್ಯಂತರ ಆದೇಶ ನೀಡುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ನಿಗದಿಪಡಿಸಲಾಗಿದೆ. ನಾಗ ಚೈತನ್ಯ ಮತ್ತು ಸಮಂತಾ ಹಲವು ವರ್ಷಗಳ ಕಾಲ ಪ್ರೀತಿಸಿ 2017ರಲ್ಲಿ ವಿವಾಹವಾಗಿದ್ದರು. ನಂತರ 2021ರಲ್ಲಿ ಇಬ್ಬರೂ ಬೇರ್ಪಡುವುದಾಗಿ ಘೋಷಿಸಿದ್ದರು. ಪ್ರಸ್ತುತ ನಾಗ ಚೈತನ್ಯ ಅವರು ನಟಿ ಶೋಭಿತಾ ಧುಲಿಪಾಲ ಅವರನ್ನು ವಿವಾಹವಾಗಿದ್ದು, ಸಮಂತಾ ಅವರು ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರ್ ಅವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಾರೆ.
AI: Naga Chaitanya moves Delhi High Court – ತುಳು ಟೈಮ್ಸ್
ಇದನ್ನೂ ಓದಿ : 20 ವರ್ಷಗಳ ಬಳಿಕ ಭಾರತೀಯ ಮಾವಿನ ಹಣ್ಣಿಗೆ ಜಪಾನ್ ನಿರ್ಬಂಧ ಹೇರಲು ಕಾರಣವೇನು?
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/FXmfYhIN-Tc?si=pgavNqHFh02R6vRZ











