ಬೆಂಗಳೂರು: Tulu Times l ಕೆಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳಿಂದ ಜನಿವಾರ ಸೇರಿದಂತೆ ಧಾರ್ಮಿಕ ಚಿಹ್ನೆಗಳನ್ನು ತೆಗೆಸಿದ ಆರೋಪ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಇದನ್ನು ಅಮಾನವೀಯ ಕೃತ್ಯ ಎಂದು ಖಂಡಿಸಿದ್ದಾರೆ.
ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಬಂದ ಕೆಲ ವಿದ್ಯಾರ್ಥಿಗಳಿಗೆ ಜನಿವಾರ, ಕಿವಿಯೋಲೆ, ಬಳೆ, ಹಿಜಾಬ್ ಹಾಗೂ ಇತರ ಧಾರ್ಮಿಕ ಚಿಹ್ನೆಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಕೆಲವರ ಉದ್ದದ ಬಟ್ಟೆಯ ತೋಳುಗಳನ್ನು ಕತ್ತರಿಸಿದ ಆರೋಪವೂ ಕೇಳಿಬಂದಿದೆ.
ಸಚಿವರ ತೀವ್ರ ಪ್ರತಿಕ್ರಿಯೆ;
ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿದ ಸಚಿವರು, ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸಬೇಕೇ ಹೊರತು, ಅವರ ಗೌರವಕ್ಕೆ ಧಕ್ಕೆ ತರುವ ಸ್ಥಳಗಳಾಗಬಾರದು ಎಂದು ಹೇಳಿದರು. ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಗ್ಗಿಸುವ ಇಂತಹ ನಡೆ ಸಂಪೂರ್ಣ ಖಂಡನೀಯ. ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಪೀಡಿತ ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು, ಸರ್ಕಾರ ನಿಮ್ಮೊಂದಿಗಿದೆ ಎಂದು ಸಚಿವರು ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಘಟಕವು ಈ ಘಟನೆ ಖಂಡಿಸಿ, ಇದು ಹಿಂದೂ ಸಮುದಾಯದ ಧಾರ್ಮಿಕ ಹಕ್ಕು, ಸಂಸ್ಕೃತಿ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದೆ. ಜನಿವಾರವು ಧಾರ್ಮಿಕ ಪರಂಪರೆ ಮತ್ತು ಗೌರವದ ಸಂಕೇತವಾಗಿದ್ದು, ಅದನ್ನು ಅವಮಾನಿಸುವುದನ್ನು ಸಮಾಜ ಸಹಿಸುವುದಿಲ್ಲ ಎಂದು ಸಂಘಟನೆ ಎಚ್ಚರಿಸಿದೆ. ಘಟನೆ ಬೆಳಕಿಗೆ ಬಂದ ಬಳಿಕ ಒಬ್ಬ ಇನ್‌ವಿಜಿಲೇಟರ್‌ರನ್ನು ಅಮಾನತುಗೊಳಿಸಲಾಗಿದ್ದು, ಮೂವರು ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಕೆಸಿಇಟಿ ಪರೀಕ್ಷೆ ರಾಜ್ಯದಾದ್ಯಂತ ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಡೆಯುವ ಪ್ರಮುಖ ಪರೀಕ್ಷೆಯಾಗಿದೆ. ಇಂತಹ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಗೌರವ, ಭದ್ರತೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಕಾಪಾಡಬೇಕು ಎಂಬ ಒತ್ತಾಯ ಹೆಚ್ಚಾಗಿದೆ. ಈ ಘಟನೆ ಪರೀಕ್ಷಾ ನಿಯಮಗಳು ಮತ್ತು ವೈಯಕ್ತಿಕ ಧಾರ್ಮಿಕ ಹಕ್ಕುಗಳ ನಡುವಿನ ಸಮತೋಲನದ ಬಗ್ಗೆ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಸರ್ಕಾರದ ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರತ್ತ ಎಲ್ಲರ ಗಮನ ಹರಿದಿದೆ.
Minister Dinesh Gundu Rao condemns the incident of Janavara being removed during CET – ತುಳುಟೈಮ್ಸ್
ಇದನ್ನೂ ಓದಿ :ಡಾ. ರಾಜ್‌ಕುಮಾರ್ ಸ್ಮಾರಕಕ್ಕೆ ಭೂಮಿ ಹಂಚಿಕೆ ವಿವಾದ : ನಟ ಚೇತನ್
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/EYKaZkoL8Qk?si=uWrfQa539mvK7sDg











