ಸುಳ್ಯ : Tulu Times l ಸುಳ್ಯದ ರಂಗಮಯೂರಿ ಕಲಾಶಾಲೆಯ ವತಿಯಿಂದ ನಡೆಯುತ್ತಿರುವ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ – 2026’ಕ್ಕೆ ಚಾಲನೆ (ಏ.13) ನೀಡಲಾಗಿದ್ದು, ಸುಳ್ಯ ಕಾಯರ್ತೋಡಿ ದೇವಸ್ಥಾನದಲ್ಲಿ ಶಿಬಿರ ಆರಂಭಗೊಂಡಿರುತ್ತದೆ.
ಆಸಕ್ತ ವಿದ್ಯಾರ್ಥಿಗಳು, ಪುಟಾಣಿಗಳು ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಶಿಬಿರಕ್ಕೆ ಬಹಳ ಸಂಭ್ರಮದಿಂದ ಹೆಜ್ಜೆಯಿಟ್ಟಿದ್ದು, ಮುಂದಿನ 9 ದಿನಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಸಾಕ್ಷಿಯಾಗಲು ಸಿದ್ಧರಾಗುತ್ತಿದ್ದಾರೆ.
ರಂಗಮಯೂರಿಯ ರಾಜ್ಯ ಮಟ್ಟದ ರಂಗ ಶೈಲಿಯ ಮಕ್ಕಳ ಬೇಸಿಗೆ ಶಿಬಿರವನ್ನು ನಟ, ನಿರ್ದೇಶಕ ಬಾಸುಮ ಕೊಡಗು ಉದ್ಘಾಟಿಸಿ ಶಿಬಿರಾರ್ಥಿ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ, ರಂಗ ಸಂಗೀತ ನಿರ್ದೇಶಕ ಮುರಳಿ ಶೃಂಗೇರಿ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ. ಟಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ರಂಗಮಯೂರಿ ಕಲಾಶಾಲೆಯ ನಿರ್ದೇಶಕ ಹಾಗೂ ಶಿಬಿರದ ಆಯೋಜಕ ಲೋಕೇಶ್ ಊರುಬೈಲ್ ಸ್ವಾಗತಿಸಿ, ಸಿಂಚನಾ ಪುತ್ತಿಲ ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಸುಳ್ಯದ ಸಾಂಸ್ಕೃತಿಕ ಕಲಾ ಶಾಲೆ ರಂಗಮಯೂರಿಯ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ’. ಕಳೆದ ಹಲವು ವರ್ಷಗಳಿಂದ ಆಕರ್ಷಕ ಮತ್ತು ವೈವಿಧ್ಯಮಯ ಶಿಬಿರವಾಗಿ ಮೂಡಿ ಬರುತ್ತಿದ್ದು ಈ ಬಾರಿ ರಂಗಮಯೂರಿಯ ಬಣ್ಣದ ಲೋಕದಲ್ಲಿ ಹಲವು ವೈವಿಧ್ಯತೆಯ ಜೊತೆ ಹೊಸ ಕ್ರಿಯಾತ್ಮಕ ಯೋಜನೆಯೊಂದಿಗೆ ಶಿಬಿರ ಮೂಡಿಬರಲಿದೆ. ಇಲ್ಲಿ ಹಲವು ಶೈಲಿಯ ರಂಗ ತರಬೇತಿಯಲ್ಲಿ ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಶೈಲೀಕೃತ ನಾಟಕಗಳ ಕಲಿಕೆ, ಪ್ರದರ್ಶನ, ಜನಪದ ಹಾಡು, ನೃತ್ಯ ದೇಸೀ ಆಟ, ದೇಸೀ ವಸ್ತುಗಳ ತಯಾರಿಕೆ, ಪ್ರಾತ್ಯಕ್ಷಿಕೆ ಇತ್ಯಾದಿ ವಿಭಿನ್ನ ಚಟುವಟಿಕೆಗಳ ಜೊತೆಗೆ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ ಎಂದು ರಂಗಮಯೂರಿಯ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.
Sulya Rangamayuri Kalashaala’s ‘Banna-2026’ state-level children’s launched – ತುಳುಟೈಮ್ಸ್
ಇದನ್ನೂ ಓದಿ :ಬಾಳೆ ಸಿಪ್ಪೆ ಫೇಸ್ ಪ್ಯಾಕ್: ನೈಸರ್ಗಿಕವಾಗಿ ಹೊಳೆಯುವ ತ್ವಚೆಗೆ ಸರಳ ಪರಿಹಾರ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/sFhnDt1F1kE?si=cGuKZXebKoCbIVG5











