ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

‘ಕರ್ನಾಟಕ ಉಳಿಸಿ, ಕಾಂಗ್ರೆಸ್ ತೊಲಗಿಸಿ’ ‘ಬೆಂಗಳೂರು ಉಳಿಸಿ’ ಹೋರಾಟ

ಬೆಂಗಳೂರು: Tulu Times | ಬಳ್ಳಾರಿಯ ಅಹಿತಕರ ಘಟನಾವಳಿಗಳ ಕುರಿತು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕಳವಳ ವ್ಯಕ್ತಪಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಇಂದು ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕುರಿತು ಮಾಹಿತಿ ನೀಡಿದರು. ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯವರ ಹತ್ಯೆಗೆ ಪ್ರಯತ್ನ ಆಗಿದೆ. ಗುರಿ ತಪ್ಪಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಆಗಿದೆ. ಇದೆಲ್ಲ ನೋಡಿದಾಗ ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬ ತೀರ್ಮಾನವನ್ನು ಕೋರ್ ಕಮಿಟಿ ಬಂದಿದೆ. ರಾಜ್ಯ ಕೋರ್ ಕಮಿಟಿ ಸಿಬಿಐ ತನಿಖೆಗೆ ಆಗ್ರಹಿಸಿ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು.

ವಿಧಾನಸಭೆ, ವಿಧಾನಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಅಕಾಂಕ್ಷಿಗಳ ಕುರಿತು ಆರ್.ಅಶೋಕ್ ಅವರ ನೇತೃತ್ವದಲ್ಲಿ ಗೋವಿಂದ ಕಾರಜೋಳ, ನಾನು, ನಳಿನ್‍ಕುಮಾರ್ ಕಟೀಲ್ ಮೊದಲಾದವರು ಪ್ರವಾಸ ಮಾಡಿದ್ದೇವೆ. ವರದಿಯನ್ನೂ ಕೊಟ್ಟಿದ್ದು, ಆ ವರದಿ ಆಧರಿಸಿ ಎನ್‍ಡಿಎ ಘಟಕದ ಜೆಡಿಎಸ್ ಜೊತೆಗೂ ಸಮಾಲೋಚನೆ ಮಾಡಿ ಶೀಘ್ರವೇ ಬಿಜೆಪಿ ಸಂಸದೀಯ ಮಂಡಳಿಗೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸಲು ತೀರ್ಮಾನಿಸಲಾಗಿದೆ. ಪಟ್ಟಿ ಕಳಿಸುವ ಮತ್ತು ಜೆಡಿಎಸ್ ಜೊತೆ ಮಾತನಾಡುವ ಅಧಿಕಾರವನ್ನು ರಾಜ್ಯ ಘಟಕದ ಅಧ್ಯಕ್ಷರಿಗೆ ಕೋರ್ ಕಮಿಟಿ ಕೊಟ್ಟಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ- ಪರಿಷತ್ತಿನ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಕೇಂದ್ರ ಸಚಿವ ಪ್ರಲ್ಹಾದ್ ಜೋóಶಿ ಅವರನ್ನು ಒಳಗೊಂಡ ಕೋರ್ ಕಮಿಟಿಯು ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದೆ. ಜನವರಿ 1ರಂದು ಬಳ್ಳಾರಿಯಲ್ಲಿ ಶಾಸಕ, ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಮನೆ ಮೇಲೆ ಸಾವಿರಾರು ಜನರು ದಾಳಿ ನಡೆಸಿದ್ದು, ಗನ್‍ನಲ್ಲಿ ಫೈರಿಂಗ್ ಮಾಡಿ ರಾಜಶೇಖರ್ ಎಂಬ ಸ್ಥಳೀಯರನ್ನು ಹತ್ಯೆ ಮಾಡಿದ್ದು ಆತಂಕಕರ ವಿಚಾರ ಎಂದರು.

ಹಿಂಸಾಕೃತ್ಯ ನಡೆಸಲೆಂದೇ ವ್ಯಾಪಕ ಸಿದ್ಧತೆ ಮಾಡಿಕೊಂಡು ಬಿಯರ್ ಬಾಟಲ್, ಸೋಡಾ ಬಾಟಲ್, ಮಾರಕಾಯುಧ ಇಟ್ಟುಕೊಂಡು ಸಾರ್ವಜನಿಕವಾಗಿಯೇ ಮನೆಯನ್ನು ಗುರಿಯಾಗಿ ಇಟ್ಟುಕೊಂಡು ಪಿಸ್ತೂಲ್‍ನಿಂದ ಶೂಟ್ ಮಾಡಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಈ ಎಲ್ಲ ಘಟನೆಗಳ ಬಗ್ಗೆ ಕೋರ್ ಕಮಿಟಿ ಸಭೆ ಕಳವಳ ವ್ಯಕ್ತಪಡಿಸಿದೆ ಎಂದು ವಿವರಿಸಿದರು.

ಇದು ಸಿನಿಮೀಯ ರೀತಿಯಲ್ಲಿ ನಡೆದಿದೆ. ಬಿಹಾರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಉತ್ತರ ಪ್ರದೇಶ ಅತ್ಯಂತ ಶಾಂತಿಯುತ ರಾಜ್ಯವಾಗಿದೆ. ಆದರೆ, ಶಾಂತಿಯುತ ರಾಜ್ಯವಾಗಿದ್ದ ಕರ್ನಾಟಕವು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಗೂಂಡಾ, ಮಾಫಿಯ, ಮಾದಕವಸ್ತುಗಳ ರಾಜ್ಯವಾಗಿ ಬದಲಾಗುತ್ತಿರುವುದು ದುರದೃಷ್ಟಕರ. ಇದರ ಹಿನ್ನೆಲೆಯಲ್ಲಿ ದೊಡ್ಡ ಷಡ್ಯಂತ್ರವಿದ್ದು, ಕಾಂಗ್ರೆಸ್ ಶಾಸಕರೇ ಘಟನೆಗೆ ಪ್ರಚೋದಿಸಿದ್ದು, ದಾಳಿಯ ನೇತೃತ್ವ ವಹಿಸಿದ್ದು ಮಾಧ್ಯಮಗಳಲ್ಲಿ ನೋಡಿದ್ದೇವೆ. ರಾಜ್ಯ ಸರಕಾರದ ತನಿಖೆ ನ್ಯಾಯಯುತ- ನಿಷ್ಪಕ್ಷಪಾತದ್ದಾಗಿರುತ್ತದೆ ಎಂಬ ನಂಬಿಕೆ ನಮಗಿಲ್ಲ. ಒಬ್ಬನ ಹತ್ಯೆ ಆಗಿದ್ದರೂ ಸರಕಾರ ಕಾಂಗ್ರೆಸ್ ಖಾಜಿ ನ್ಯಾಯ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

‘Save Karnataka, get rid of Congress’ ‘Save Bengaluru’ struggle- ತುಳುಟೈಮ್ಸ್

‌ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 180

You cannot copy content of this page