ಬೆಂಗಳೂರು: Tulu Times | ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ತರಲು ಕಾಂಗ್ರೆಸ್ ಸರಕಾರ ಹೊರಟಿದೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಆಕ್ಷೇಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವತ್ತಿನಿಂದ ಇವತ್ತಿನವರೆಗೆ ಅವರು ಮಾಡಿದ್ದೆಲ್ಲವನ್ನೂ ಒಪ್ಪಿಕೊಳ್ಳಬೇಕು; ಯಾವುದೇ ವಿರೋಧ ಮಾಡಬಾರದು ಎಂಬುದೇ ಕಾಂಗ್ರೆಸ್ಸಿನ ಮಾನಸಿಕತೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸಬೇಕಿತ್ತು. ಅದೆಲ್ಲವನ್ನೂ ಬಿಟ್ಟು ಕಲಾಪವು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ಮಂಡನೆಗೆ ಸೀಮಿತವಾಗಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಬಯಸುತ್ತಿರುವುದೇನು? ಕಾಂಗ್ರೆಸ್ಸಿಗರು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವನ್ನು ಯಾವ ಕಾರಣಕ್ಕಾಗಿ ತಂದಿದೆ? ಇದರ ಹಿಂದಿರುವ ಉದ್ದೇಶ ಏನು? ಇದರ ಹಿಂದಿರುವ ಜನ ಯಾರು ಎಂದು ಕೇಳಿದರು. ಬಹಳ ಮುಖ್ಯವಾಗಿ ಇವತ್ತು ಕರ್ನಾಟಕದಲ್ಲಿ ಫ್ಯಾಕ್ಟ್ ಚೆಕ್ ಏಜೆನ್ಸಿ ಹೊಸದಾಗಿ ಆರಂಭವಾಗಿದೆ. ಈ ಏಜೆನ್ಸಿಯ ಸಭೆಯನ್ನು 2023ರಲ್ಲಿ ರಜನೀಶ್ ಗೋಯಲ್ ಅವರ ನೇತೃತ್ವದಲ್ಲಿ ಮಾಡಲಾಗಿದೆ. ಇದರಲ್ಲಿ ಖಾಸಗಿ ಜನರಿದ್ದಾರೆ; ಖಾಸಗಿ ಏಜೆನ್ಸಿಯವರು, ಕಾಂಗ್ರೆಸ್ಸಿಗೆ ಸಹಾಯ ಮಾಡುವಂಥ ಕೆಲವು ಸಂಸ್ಥೆಗಳಿವೆ ಎಂದು ಆರೋಪಿಸಿದರು. ಇದರ ಅಧ್ಯಕ್ಷತೆಯನ್ನು ಪ್ರಿಯಾಂಕ್ ಖರ್ಗೆ ವಹಿಸುತ್ತಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು ಎಲ್ಲರೂ ಇರುತ್ತಾರೆ. ಆದರೆ, ಫ್ಯಾಕ್ಟ್ ಚೆಕ್ ಏಜೆನ್ಸಿಯ ಜವಾಬ್ದಾರಿಯನ್ನು ಪ್ರಿಯಾಂಕ್ ಖರ್ಗೆಯವರಿಗೆ ಕೊಟ್ಟಿದ್ದಾರೆ ಎಂದು ವಿವರಿಸಿದರು.
ವರ್ಷಕ್ಕೆ 3ರಿಂದ 4 ಕೋಟಿ ರೂ. ಖರ್ಚು..!
ಈ ಏಜೆನ್ಸಿಗೆ ಸರಕಾರವು ವರ್ಷಕ್ಕೆ 3ರಿಂದ 4 ಕೋಟಿ ರೂ. ಖರ್ಚು ಮಾಡುತ್ತಿದೆ. ಕಾಂಗ್ರೆಸ್ ಚಮಚಾಗಳು, ಚೇಲಾಗಳಿಗೆ ಒಂದು ಜವಾಬ್ದಾರಿ ಕೊಡುವ ಉದ್ದೇಶ ಇದರ ಹಿಂದಿದೆ. ಅವರು ಮಾಧ್ಯಮಗಳನ್ನು ಗಮನಿಸಿ ಸರಕಾರಕ್ಕೆ ವರದಿ ಕೊಡಬೇಕಿದೆ. ಸಂಬಂಧಿತ ಎಸ್ಪಿಗೆ ಹೇಳಿ ಕೇಸ್ ಮಾಡಿಸುವುದು ಫ್ಯಾಕ್ಟ್ ಚೆಕ್ ಏಜೆನ್ಸಿಯ ಕೆಲಸ ಎಂದು ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದರು. ಇಡೀ ರಾಜ್ಯದಲ್ಲಿ ದ್ವೇಷ ಹುಟ್ಟುಹಾಕುವ, ಬಾಯಿಗೆ ಬಂದಂತೆ ಮಾತನಾಡುವ ಮಿಸ್ಟರ್ ಪ್ರಿಯಾಂಕ್ ಖರ್ಗೆ ಇದರ ನೇತೃತ್ವ ವಹಿಸಿದ್ದಾರೆ. ಇವರಿಂದ ನ್ಯಾಯ ಸಿಗುತ್ತದೆ ಎಂದು ನಾವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ರಾಜ್ಯದಿಂದ ತಾಲ್ಲೂಕು ಮಟ್ಟದ ವರೆಗೆ ಏಜೆನ್ಸಿ ಇದ್ದು, ಇದಕ್ಕೆ ಸರಕಾರ ತೆರಿಗೆ ಹಣವನ್ನು ಕೊಡುತ್ತಿದೆ. ಬಿಜೆಪಿಯ ಸಾಮಾಜಿಕ ಜಾಲತಾಣದ 35 ಜನರ ಮೇಲೆ ಕೇಸ್ ಹಾಕಿದ್ದಾರೆ. ಎಂಎಲ್‍ಎ, ಎಂಎಲ್‍ಸಿಯವರ ಮೇಲೆ ಕೇಸ್ ಹಾಕಿದ್ದು, ಈ ಏಜೆನ್ಸಿಯ ಕೆಲಸ ಎಂದು ಆಕ್ಷೇಪಿಸಿದರು. ಇವರು ಯಾರು ಯಾರ ವಿರುದ್ಧ ಮಾತನಾಡುತ್ತಾರೆ, ಯಾರು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಾರೆಂದು ವರದಿ ಕೊಡುತ್ತಾರೆ. ಇದರ ಆಧಾರದಲ್ಲಿ ಸರಕಾರ ಕೇಸ್ ಹಾಕುತ್ತಿದೆ ಎಂದು ಟೀಕಿಸಿದರು. ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
Violation of freedom of expression granted by the Constitution: Shobha Karandlaje- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











