ಉಡುಪಿ : Tulu Times | ಉಡುಪಿ ಜಿಲ್ಲೆಯಲ್ಲಿರುವ ಕಾಪು, ಕರಾವಳಿ ಕರ್ನಾಟಕದ ಅತ್ಯಂತ ಸುಂದರವಾದ, ಶಾಂತ ಹಾಗೂ ದೂರದಿಂದಲೇ ಮನಸೆಳೆಯುವ ಕಡಲತೀರಗಳಲ್ಲಿ ಒಂದಾಗಿದೆ. ಅರಬ್ಬೀ ಸಮುದ್ರದ ಹೊಳೆಯುವ ಅಲೆಗಳು, ತೆಂಗಿನ ಮರಗಳ ಸಾಲು ಸಾಲು, ನಕ್ಷತ್ರದಂತೆ ಮಿನುಗುವ ಮರಳು, ಹಾಗೂ ಪ್ರಾಚೀನ ದೀಪಸ್ತಂಭ ಇತ್ಯಾದಿ ಎಲ್ಲವನ್ನೂ ತನ್ನಲ್ಲೇ ಒಗ್ಗೂಡಿಸಿಕೊಂಡಿರುವ ಕಾಪು, ಪ್ರಕೃತಿ ಪ್ರಿಯರಿಗೂ, ಛಾಯಾಗ್ರಾಹಕರಿಗೂ, ಕುಟುಂಬ ಪ್ರವಾಸಿಗರಿಗೂ ಉತ್ತಮ ತಾಣವಾಗಿದೆ.
ಕಾಪು ಬೀಚ್ ತನ್ನ ಸ್ವಚ್ಛತೆ, ಹಾಗೂ ಪ್ರವಾಸಿ ಪ್ರಿಯರಿಗೆ ನೀಡುವ ಶಾಂತಿ, ಮತ್ತು ಇಲ್ಲಿನ ಸಮುದ್ರ ಅಲೆಗಳು ಮನಶ್ಯಾಂತಿ ನೀಡುವುದಲ್ಲದೇ, ಇಲ್ಲಿ ಬೆಳಗಿನ ಹೊನಲು ಅಥವಾ ಸಾಯಂಕಾಲದ ಸೂರ್ಯಾಸ್ತ ಎರಡೂ ಕ್ಷಣಗಳು ಹೃದಯಕ್ಕೆ ತುಂಬಾ ಹತ್ತಿರವಾಗುತ್ತವೆ. ಇಷ್ಟೆಲ್ಲಾ ಕಾಪುವಿನ ಈ ಸೌಂದರ್ಯಕ್ಕೆ ಮಾರುಹೋಗುವ ಪ್ರವಾಸಿಗರು ಇಲ್ಲಿಗೆ ಬರುತ್ತಲೇ ಇರುತ್ತಾರೆ. ಈ ಸಲುವಾಗಿ ಕಾಪು ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರಕಾರ ಅನುದಾನ ಒದಗಿಸಬೇಕು ಎಂದು ಶಾಸಕ ಗುರ್ಮೆ ಶೆಟ್ಟಿ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಸಂದರ್ಭ ಸದನದಲ್ಲಿ ಸರಕಾರಕ್ಕೆ ಮನವಿ ಮಾಡಿದ್ದಾರೆ.
5 ಕೋಟಿ ಹಣ ಬಿಡುಗಡೆ ಮಾಡುವುದಾಗಿ ಪ್ರಥಮ ಅಧಿವೇಶನದಲ್ಲೇ ಭರವಸೆ ;
ಕರ್ನಾಟಕ ವಿಧಾನಸಭೆ ಅಧಿವೇಶನದ ಚುಕ್ಕೆ ಗುರುತಿನ ಸಂಖ್ಯೆ 380 ರಡಿ ಈ ಕುರಿತು ರಾಜ್ಯ ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನಾ ಶಾಸ್ತ್ರ ಇಲಾಖೆಯ ಸಚಿವ ಹೆಚ್.ಕೆ.ಪಾಟೀಲ್ ಅವರಿಗೆ ಮನವಿ ಮಾಡುತ್ತಾ ನಾನು ಸತತ 3 ನೇ ಬಾರಿಗೆ ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ಕಾಪು ಕ್ಷೇತ್ರದಲ್ಲಿ ಮಾರಿಗುಡಿ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ಮತ್ತು ಅಂತರಾಷ್ಟ್ರೀಯ ಮನ್ನಣೆ ಪಡೆದ ಲೈಟ್ ಹೌಸ್, ಬ್ಲೂ ಫ್ಲಾಗ್ ಬೀಚ್ ಸಹಿತ ಹಲವಾರು ಧಾರ್ಮಿಕ ಮತ್ತು ಪ್ರವಾಸೋದ್ಯಮ ಸ್ಥಳಗಳಿವೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಿದ್ದಾರೆ. 1 ಜಿಲ್ಲೆ 1 ತಾಣ ಯೋಜನೆಯಡಿ ಕಾಪು ಕ್ಷೇತ್ರವನ್ನು ನಿಗದಿಗೊಳಿಸಿ, ಪ್ರವಾಸಿ ತಾಣದ ಅಭಿವೃದ್ಧಿಗೆ 5 ಕೋಟಿ ಹಣ ಬಿಡುಗಡೆ ಮಾಡುವುದಾಗಿ ಪ್ರಥಮ ಅಧಿವೇಶನದಲ್ಲೇ ಭರವಸೆ ನೀಡಿದ್ದೀರಿ ಎಂದು ಈ ಬಗ್ಗೆ ಸಚಿವರು ಮತ್ತೊಮ್ಮೆ ಮನವಿ ಮಾಡಿಕೊಂಡಿರುತ್ತಾರೆ.
ಮುಂದಿನ ಆರ್ಥಿಕ ವರ್ಷದೊಳಗೆ ಅನುದಾನ ಬಿಡುಗಡೆ ;
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ.ಪಾಟೀಲ್ ಅವರು, ಕಾಪು ವನ್ನು ಪ್ರವಾಸಿ ತಾಣವೆಂದು ಘೋಷಣೆ ಮಾಡಿದ್ದೇವೆ. 75 ಲಕ್ಷ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಕ್ಷೇತ್ರಗಳ ಸಂಪರ್ಕ ಸೇತುವೆ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ನಿಮ್ಮ ಬೇಡಿಕೆಯಂತೆ ಲೈಟ್ ಹೌಸ್ ಬೀಚ್ ಅಭಿವೃದ್ಧಿ ಬಗ್ಗೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಘೋಷಣೆ ಮಾಡಿದ್ದೆವು. ಈ ಕಾಮಗಾರಿಗೆ ಅನುಮೋದನೆ ನೀಡಿ, ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮಕ್ಕೆ ವಹಿಸಿದ್ದೇವೆ. ಖಂಡಿತವಾಗಿಯೂ ಮುಂದಿನ ಆರ್ಥಿಕ ವರ್ಷದೊಳಗೆ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು. Does the government provide funding for the development of tourist destinations in the Kaapu area? -ತುಳು ಟೈಮ್ಸ್
ಇದನ್ನೂ ಓದಿ :ವೈದ್ಯರಿಗೆ ವೃತ್ತಿ ಪ್ರಮಾಣ ಪತ್ರ ಕಡ್ಡಾಯ..ನಕಲಿ ಡಾಕ್ಟರ್ಸ್‌ಗಳ ಕಡಿವಾಣಕ್ಕೆ ಸರ್ಕಾರ ಚಿಂತನೆ
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/e1543EY8Q90?si=LqsxVk1x8SkCerXJ











