Belgavi : ಮೊನ್ನೆಯಷ್ಟೇ ಕೃಷ್ಣಮೃಗಗಳ ಸಾವಿಗೆ ಕಾರಣವಾದ ಕಾಯಿಲೆ ಬಗ್ಗೆ ಅರಣ್ಯಾಧಿಕಾರಿಗಳು ತಲೆಕೆಡಿಸಿಕೊಂಡಿದ್ದರು. ಆದರೆ ಇದೀಗ, ಮರಣೋತ್ತರ ಪರೀಕ್ಷೆ ಬಗ್ಗೆ ಲ್ಯಾಬ್ ವರದಿ ಬಂದಿದ್ದು, 31 ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗವೇ ಕಾರಣವೆಂಬುವುದು ದೃಢವಾಗಿದೆ. 31 ಕೃಷ್ಣಮೃಗಗಳ ಸಾವಿನ ನಂತರ ಇನ್ನೂಳಿದ 7 ಕೃಷ್ಣಮೃಗಗಳನ್ನ ನಿರಂತರವಾಗಿ ಚಿಕಿತ್ಸೆ ನೀಡಿ ಹಗಲಿರುಳು ಶ್ರಮಿಸಿ ಬದುಕಿಸಿಕೊಳ್ಳುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಮಾಡಿದ್ದಾರೆ.
ನಾಲ್ಕು ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿ ಲ್ಯಾಬ್ಗೆ ರವಾನಿಸಲಾಗಿತ್ತು. ಇದರಲ್ಲಿ ಪರೀಕ್ಷೆ ವೇಳೆ ಗಳಲೆ ರೋಗದಿಂದ ಕೃಷ್ಣಮೃಗಗಳು ಸಾವನ್ನಪ್ಪಿವೆ ಅನ್ನೋದು ಗೊತ್ತಾಗಿದೆ. ಗಳಲೆ ರೋಗ ಅಂದರೆ, ಇದೊಂದು ಬ್ಯಾಕ್ಟೀರಿಯಾದಿಂದ ಹರಡುವ ಕಾಯಿಲೆಯಾಗಿದ್ದು, ಇದಕ್ಕೆ ಹಿಮೋರಿಜನ್ ಸೆಪ್ಟಿಸಿಮಿಯಾ ಎಂದು ಕರೆಯುತ್ತಾರೆ. ಇದು ಸಸ್ಯಹಾರಿ ಪ್ರಾಣಿಗಳ ದೇಹದಲ್ಲಿರುತ್ತೆ. ವಾತಾವರಣದಲ್ಲಿ ಏರುಪೇರಾದಾಗ ಇದರ ಶಕ್ತಿ ಹೆಚ್ಚಾಗಿ ಕಿಡ್ನಿ, ಲಂಗ್ಸ್, ಹೃದಯ ಭಾಗ ಸೇರಿದಂತೆ ದೇಹದ ಎಲ್ಲಾ ಅಂಗಾಗಳನ್ನ ಹಾನಿ ಮಾಡುತ್ತೆ. ಈ ಬ್ಯಾಕ್ಟೀರಿಯಾ ಆ್ಯಕ್ಟೀವ್ ಆದ ಒಂದೇ ದಿನದಲ್ಲಿ ಪ್ರಾಣಿಗಳು ಸಾವನ್ನಪ್ಪುತ್ತವೆ.
ಇದು ಗಾಳಿಯಿಂದಲೂ ರೋಗ ಹರಡುವ ಸಾಧ್ಯತೆ ಇದ್ದು, ಹೊರಗಿನಿಂದಲೂ ಪ್ರಾಣಿಗಳ ದೇಹ ಸೇರಿಕೊಂಡು ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿರಬಹುದು ಅನ್ನೋದು ಕೂಡ ಸಂಶಯ ಇದೆ. ಈ ರೋಗಕ್ಕೆ ಕನ್ನಡದಲ್ಲಿ ಗಳಲೆ ರೋಗ ಎಂದು ಕರೆಯುತ್ತಾರೆ. ಇದೇ ರೋಗದಿಂದ ಕೃಷ್ಣಮೃಗಗಳು ಸಾವನ್ನಪ್ಪಿವೆ ಅಂತಾ ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಈಗಾಗಲೇ ಮೃಗಾಲಯದಲ್ಲಿ ಬೇರೆ ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಲಾಗಿದೆ. ಎಲ್ಲಾ ಪ್ರಾಣಿಗಳನ್ನ ನಿಗಾದಲ್ಲಿ ಇಡಲಾಗಿದ್ದು, ಎಲ್ಲದಕ್ಕೂ ರೋಗನಿರೋಧಕ ಔಷಧಿ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಸಾಕು ಪ್ರಾಣಿಗಳಿಗೆ ಹರಡುವ ಸಾಧ್ಯತೆ ಇರುವ ಕಾರಣ, ಪಶು ಸಂಗೋಪನೆ ಇಲಾಖೆಗೆ ತಿಳಿಸಿದ್ದು ಮುಂಜಾಗ್ರತಾ ಕ್ರಮಗಳನ್ನ ವಹಿಸಲಾಗುವುದು ಎಂದು ಡಿಎಫ್‌ಒ ಕ್ರಾಂತಿ ಹೇಳಿದ್ದಾರೆ.
ಇದನ್ನೂ ಓದಿ :Puttur: ಕೊಟ್ಟಿಗೆಯಲ್ಲಿಟ್ಟಿದ್ದ 16 ಗೋಣಿ ಅಡಿಕೆ ಕಳವು
……..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/y-ir1Jy2T40?si=90oupIZX6wzeX976











