ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಪುತ್ತೂರುರಾಜಕೀಯ

Puttur: ಬಿಜೆಪಿ – ಪುತ್ತಿಲ ಪರಿವಾರದಲ್ಲಿ ಬಿರುಕು! ಅಟಲ್‌ ವಿರಾಸತ್‌ ಕಾರ್ಯಕ್ರಮಕ್ಕೆ ಪುತ್ತಿಲ ಗೈರು

Puttur: ದ.ಕ ಜಿಲ್ಲಾ ಬಿಜೆಪಿಯ ನೇತೃತ್ವದಲ್ಲಿ ನಡೆದ ಅಟಲ್‌ ವಿರಾಸತ್‌ ಕಾರ್ಯಕ್ರಮದಲ್ಲಿ ಬಿಜೆಪಿ ಒಳಗಿನ ವಿರಸ ಮತ್ತೆ ಗೊತ್ತಾಗಿದೆ. ಪುತ್ತೂರು ಕಮಲ ಪಾಳಯದಲ್ಲಿ ಮೂಡಿದ್ದ ಬಿರುಕು ಒಂದು ಹಂತಕ್ಕೆ ಬಂದು ತಲುಪಿದೆ ಅನ್ನುವಷ್ಟರಲ್ಲಿ ಮತ್ತಷ್ಟು ಒಡಕು ಮೂಡಿದ್ದು ದೃಢವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಅರುಣ್‌ ಕುಮಾರ್‌ ಪುತ್ತಿಲ ಅವರಿಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿತ್ತು. ಆ ನಂತರ ಜನನಾಯಕರಾಗಿ ಮೆರೆದ್ರು. ಚುನಾವಣೆಯಲ್ಲಿ ಸೋತರೂ ಭರವಸೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಿಜೆಪಿ ಒಳಗಿನ ಕಳ್ಳಾಟಕ್ಕೆ ಬೇಸತ್ತ ಪುತ್ತಿಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯದ ಬಿಸಿ ಮುಟ್ಟಿಸಿದ್ದರು.

ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಣಿಸಿಕೊಂಡಿದ್ದ ಬಿಜೆಪಿಯೊಳಗಿನ ಎರಡು ತಂಡಗಳ ನಡುವಿನ ತಿಕ್ಕಾಟ ಲೋಕಸಭಾ ಚುನಾವಣೆ ಹೊತ್ತಿಗೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಕರಾವಳಿ ರಾಜಕೀಯದಲ್ಲಿ ಪುತ್ತಿಲ ಬೆಳವಣಿಗೆ ಬಿಜೆಪಿ ಕೂಟಕ್ಕೆ ಬಿಸಿ ಬಿಸಿ ತುಪ್ಪವಾಗಿತ್ತು.

ಇದನ್ನೂ ಓದಿ: Kadaba: ಮನೆಯಲ್ಲಿ ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ

ಸಂಧಾನ ಏನಾಯ್ತು?
ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಣಿಸಿಕೊಂಡಿದ್ದ ಪುತ್ತಿಲ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಜೊತೆಗೆ ನಿಕಟ ಸಂಪರ್ಕದಲ್ಲಿದ್ದರು. ಲೋಕಸಭಾ ಚುನಾವಣೆಯಲ್ಲಿ ಅರುಣ್‌ ಕುಮಾರ್‌ ಅವರನ್ನು ಬಿಜೆಪಿ ತರಲು ಸತತ ಪ್ರಯತ್ನ ನಡೆದಿತ್ತು. ಬಿ. ಎಸ್‌ ಯಡಿಯೂರಪ್ಪ ಸೇರಿದಂತೆ ರಾಜ್ಯದ ಬಿಜೆಪಿ ಪ್ರಮುಖರು ಪುತ್ತಿಲರ ಸಂಧಾನಕ್ಕೆ ಪ್ರಯತ್ನ ಮಾಡಿದ್ದರು. ಕೊನೆಗೆ ಸಂಧಾನ ಫಲಕೊಟ್ಟು ಲೋಕಾ ಚುನಾವಣೆಯಲ್ಲಿ ಬಿಜೆಪಿಗೆ ಪುತ್ತಿಲ ಬಲ ತುಂಬಿದ್ದರು.

ಕಾರ್ಯಕರ್ತರಲ್ಲಿ ಭಾರೀ ಅಸಮಾಧಾನ
ಲೋಕಸಭಾ ಚುನಾವಣೆಯ ವೇಳೆ ಪುತ್ತಿಲ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಈ ವೇಳೆ ಪುತ್ತಿಲ ಅವರಿಗೆ ಬಿಜೆಪಿಯ ಜವಾಬ್ದಾರಿ ನೀಡಲಾಗುತ್ತೆ ಎಂಬ ಭರವಸೆ ನೀಡಲಾಗಿತ್ತು ಎಂಬ ಮಾತುಗಳು ಇವೆ. ಲೋಕಸಭಾ ಚುನಾವಣೆಯಾಗಿ ವರ್ಷಗಳೇ ಉರುಳಿದರೂ, ಪುತ್ತಿಲ ಅವರಿಗೆ ಇನ್ನೂ ಸ್ಥಾನಮಾನ ಸಿಕ್ಕಿಲ್ಲ. ಇದರಿಂದ ಪುತ್ತಿಲ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುತ್ತಿಲ ಪರಿವಾರ ಬರ್ಖಾಸ್ತು ಮಾಡಿ – ಕಿಶೋರ್‌ ಬೊಟ್ಯಾಡಿ
ಇನ್ನು ಅಟಲ್‌ ವಿರಾಸತ್‌ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಹಂಚಿಕೆಗೆ ವಾರ್ಡ್‌ ಒಂದರ ಮನೆಗೆ ತೆರಳಿದ್ದಾಗ ಅಸಮಾಧಾನ ಸ್ಪೋಟಗೊಂಡಿದೆ. ಪುತ್ತಿಲ ಬೆಂಬಲಿಗರು ಎಂಎಲ್‌ಸಿ ಕಿಶೋರ್‌ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನ ನೇರವಾಗಿ ಪ್ರಶ್ನಿಸಿದ್ದಾರೆ. ಅರುಣ್‌ ಪುತ್ತಿಲರಿಗೆ ಸ್ಥಾನಮಾನ ಯಾಕೆ ಸಿಕ್ಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕಿಶೋರ್‌ ಬೊಟ್ಯಾಡಿ ಪುತ್ತಿಲ ಪರಿವಾರ ಬರ್ಖಾಸ್ತು ಮಾಡಿ ಎಂಬ ಮಾತುಗಳನ್ನೂ ಆಡಿದ್ದರು.

ಬಿ. ವೈ ವಿಜಯೇಂದ್ರ ಭಾಗಿ – ಪುತ್ತಿಲ ಬೆಂಬಲಿಗರು ಗೈರು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಅಟಲ್‌ ವಿರಾಸತ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜಿಲ್ಲಾ ಮಟ್ಟದ ಅಟಲ್ ವಿರಾಸತ್ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್‌ಪುತ್ತಿಲ ಸಹಿತ ಪುತ್ತಿಲ ಪರಿವಾರದ ಪ್ರಮುಖರು ಗೈರಾಗಿದ್ದಾರೆ. ಇದರಿಂದ ಬಿಜೆಪಿ ಒಳಗಿನ ಆಂತರಿಕ ಮುನಿಸು ತಣಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಸ್ವತಃ ರಾಜ್ಯಾಧ್ಯಕ್ಷರೇ ಭಾಗವಹಿಸಿದ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್‌ಪುತ್ತಿಲ ಸಹಿತ ಪುತ್ತಿಲ ಪರಿವಾರದ ಮುಖಂಡರು ಗೈರಾಗಿ ತಮ್ಮ ಅಸಮಾಧನವನ್ನು ವ್ಯಕ್ತಪಡಿಸಿದ್ದು ಚರ್ಚೆಗೆ ಈಡಾಗಿದೆ.

ಪುತ್ತಿಲರನ್ನು ಸಂಪರ್ಕಿಸಿಲ್ಲ..!
ಶಿವಮೊಗ್ಗ ಲೋಕಸಭಾ ಚುನಾವಣೆ ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಂಡಿದ್ದ ಅರುಣ್ ಪುತ್ತಿಲ ಅವರು ವಿಜಯೇಂದ್ರ ಅವರ ನಿಕಟ ಸಂಪರ್ಕದಲ್ಲಿದ್ದರು. ಪುತ್ತೂರಿಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ನೀಡುವ ಸಂದರ್ಭದಲ್ಲಿ ಅರುಣ್ ಪುತ್ತಿಲ ಅವರ ಜತೆ ಮಾತುಕತೆ ನಡೆಸುವ ಸಾಧ್ಯತೆ ಇತ್ತು ಎನ್ನಲಾಗಿತ್ತು. ಆದರೆ ಯಾವುದೇ ಮಾತುಕತ ನಡೆದಿಲ್ಲ ಎನ್ನುವ ಮಾಹಿತಿ ಪುತ್ತಿಲ ಪರಿವಾರದ ಮುಖಂಡರಿಂದ ದೊರೆತಿದೆ.

ಪ್ರತಿಕ್ರಿಯೆಗೆ ನಿರಾಕರಣ
ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಮಾಧ್ಯಮ ಮಿತ್ರರು ಪ್ರಶ್ನಿಸಿದ್ದಾರೆ. ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಬೆಂಬಲಿಗರ ಗೈರಿನ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ವಿಜಯೇಂದ್ರ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.

ಆಹ್ವಾನ ಇರಲಿಲ್ಲ – ಅರುಣ್ ಕುಮಾರ್ ಪುತ್ತಿಲ
ಅಟಲ್ ವಿರಾಸತ್ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಸಿಕ್ಕಿಲ್ಲ. ಹಾಗಾಗಿ ನಾನು ಹೋಗಿಲ್ಲ. ಈ ಹಿಂದೆ ವಿಹಿಂಪ ಕಟ್ಟಡ ಶಿಲಾನ್ಯಾಸದ ಸಂದರ್ಭದಲ್ಲಿ ಉಂಟಾದ ಗೊಂದಲ ಇಲ್ಲಿಯೂ ಆಗಬಾರದು ಎನ್ನುವ ಕಾರಣಕ್ಕೆ ದೂರ ಉಳಿದಿದ್ದೇವೆ. ನಾವು 6 ತಿಂಗಳ ಹಿಂದೆಯೇ ವಾಜಪೇಯಿ ಅವರ ಹೆಸರಿನಲ್ಲಿ ಮನೆ ನಿರ್ಮಾಣ ಮಾಡುವ ಮೂಲಕ ಅವರನ್ನು ಸ್ಮರಿಸಿದ್ದೇವೆ. ಅದಲ್ಲದೆ ನನ್ನನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಸಂದರ್ಭ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ಅದಾಗ್ಯೂ ಹಿರಿಯರು ಕೊಟ್ಟ ಮಾತನ್ನು ತಪ್ಪಲಾರರು ಎನ್ನುವ ವಿಶ್ವಾಸ ಇದೆ ಎಂದಿದ್ದಾರೆ ಅರುಣ್‌ ಕುಮಾರ್‌ ಪುತ್ತಿಲ.

ಒಟ್ಟಿನಲ್ಲಿ ಬಿಜೆಪಿ ಭದ್ರಕೋಟೆಯಂತೆ ಮೆರೆದಿದ್ದ ಪುತ್ತೂರಿನಲ್ಲಿ ಆಂತರಿಕ ಕಲಹವೇ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದೆ. ಅರುಣ್‌ ಕುಮಾರ್‌ ಪುತ್ತಿಲ ಅಭಿಮಾನಿಗಳು ಬಿಜೆಪಿ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 174

You cannot copy content of this page