ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪ್ರಿಯಕರನ ಜೊತೆ ಸೇರಿ ತಂದೆ-ತಾಯಿ, ತಂಗಿಯನ್ನೇ ಕೊಂದಳಾ? ಬೆಚ್ಚಿಬೀಳಿಸಿದ ತ್ರಿವಳಿ ಹತ್ಯೆ

ಬೆಂಗಳೂರು: Tulu Times l ಸಾಲದ ಹೊರೆ, ಲಿವ್-ಇನ್ ಸಂಬಂಧದ ವಿವಾದ ಮತ್ತು ಕುಟುಂಬದೊಂದಿಗೆ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆ ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ತಂದೆ, ತಾಯಿ ಹಾಗೂ ತಂಗಿಯನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಘಟನೆ ಬೆಂಗಳೂರಿನಲ್ಲಿ ಭಾರೀ ಸಂಚಲನ ಮೂಡಿಸಿದೆ.

ಮೃತರನ್ನು 56 ವರ್ಷದ ಸೋಮಸುಂದರ್, ಅವರ ಪತ್ನಿ 48 ವರ್ಷದ ಲಕ್ಷ್ಮಿ ಹಾಗೂ ಕಿರಿಯ ಪುತ್ರಿ 20 ವರ್ಷದ ಸುಪ್ರಿಯಾ ಎಂದು ಗುರುತಿಸಲಾಗಿದೆ. ವೈಟ್‌ಫೀಲ್ಡ್‌ನ ನೆಲ್ಲೂರಹಳ್ಳಿ ನಿವಾಸಿಗಳಾಗಿದ್ದ ಇವರು ಜೂನ್ 22ರ ರಾತ್ರಿ ಸೀಗೇಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಹತ್ಯೆಯಾಗಿದ್ದಾರೆ. ಆರೋಪಿಗಳಾದ ಶ್ವೇತಾ (24) ಮತ್ತು ಆಕೆಯ ಪ್ರಿಯಕರ ಕೆನ್ನೆತ್ ಪರಾರಿಯಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದಾರೆ.

ಇಂಜಿನಿಯರಿಂಗ್ ಪದವೀಧರೆ ಆಗಿರುವ ಶ್ವೇತಾ ಕಳೆದ ಮೂರು ವರ್ಷಗಳಿಂದ ತನ್ನ ಸಹಪಾಠಿ ಕೆನ್ನೆತ್ ಜೊತೆ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ಸಂಬಂಧಕ್ಕೆ ತಂದೆ ಸೋಮಸುಂದರ್ ವಿರೋಧ ವ್ಯಕ್ತಪಡಿಸಿದ ನಂತರ, ಶ್ವೇತಾ ಸುಮಾರು ಎರಡೂವರೆ ವರ್ಷಗಳ ಹಿಂದೆ ಮನೆ ಬಿಟ್ಟು ಹೊರಬಂದಿದ್ದಳು.

ಕೆಲ ತಿಂಗಳ ಹಿಂದೆ ಶ್ವೇತಾ ಮತ್ತು ಕೆನ್ನೆತ್ ತಮ್ಮ ಉದ್ಯೋಗಗಳನ್ನು ತೊರೆದು, ಕೆ.ಆರ್.ಪುರಂನ ಸೀಗೇಹಳ್ಳಿಯ ಬಾಡಿಗೆ ಮನೆಯಲ್ಲಿ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ವೇಳೆ ಶ್ವೇತಾ ತನ್ನ ತಾಯಿ ಲಕ್ಷ್ಮಿಯ ಹೆಸರಿನಲ್ಲಿ ಚಿನ್ನದ ಸಾಲ ಹಾಗೂ ವೈಯಕ್ತಿಕ ಸಾಲ ಸೇರಿದಂತೆ ₹32 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದಳು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಸಾಲದ ಕಂತುಗಳನ್ನು ಪಾವತಿಸದ ಕಾರಣ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ನೋಟಿಸ್‌ಗಳು ಲಕ್ಷ್ಮಿಗೆ ಬರುತ್ತಿದ್ದವು ಎನ್ನಲಾಗಿದೆ. ಈ ಬಗ್ಗೆ ತಾಯಿ ಹಲವು ಬಾರಿ ಪ್ರಶ್ನಿಸಿದ್ದರೂ ಶ್ವೇತಾ ನಿರ್ಲಕ್ಷ್ಯ ತೋರಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸಂಜೆ ಸೋಮಸುಂದರ್, ಲಕ್ಷ್ಮಿ ಹಾಗೂ ಸುಪ್ರಿಯಾ ಶ್ವೇತಾ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ಗೆ ತೆರಳಿ ಸಾಲ ಮತ್ತು ಲಿವ್-ಇನ್ ಸಂಬಂಧದ ಕುರಿತು ಪ್ರಶ್ನಿಸಿದ್ದಾರೆ. ಈ ವೇಳೆ ಕುಟುಂಬದವರ ನಡುವೆ ತೀವ್ರ ವಾಗ್ವಾದ ನಡೆದಿದೆ.

ಪೊಲೀಸರ ಪ್ರಕಾರ, ಮಾತಿನ ಚಕಮಕಿ ಬಳಿಕ ಆಕ್ರೋಶಗೊಂಡ ಶ್ವೇತಾ, ಲಕ್ಷ್ಮಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಕುತ್ತಿಗೆ, ತಲೆ, ಎದೆ ಹಾಗೂ ಹೊಟ್ಟೆ ಭಾಗಗಳಿಗೆ 15ಕ್ಕೂ ಹೆಚ್ಚು ಬಾರಿ ಇರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಪತ್ನಿಯ ಕಿರುಚಾಟ ಕೇಳಿ ಒಳಗೆ ಬಂದ ಸೋಮಸುಂದರ್ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗಂಭೀರ ಗಾಯಗೊಂಡಿದ್ದರೂ ಅವರು ಹೊರಬಂದು ಭದ್ರತಾ ಸಿಬ್ಬಂದಿಯ ನೆರವಿನಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದೇ ವೇಳೆ ತಂಗಿ ಸುಪ್ರಿಯಾ ಕೂಡ ಘಟನಾ ಸ್ಥಳಕ್ಕೆ ಬಂದಾಗ ಆಕೆಯ ಮೇಲೂ ಚಾಕು ಇರಿದು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ, ಕುಟುಂಬದ ಆಸ್ತಿಯಲ್ಲಿ ತನ್ನ ಪಾಲು ನೀಡುವಂತೆ ಶ್ವೇತಾ ಒತ್ತಡ ಹೇರಿದ್ದಳು ಎಂದು ಅವರು ಹೇಳಿರುವುದಾಗಿ ತಿಳಿದುಬಂದಿದೆ.

ಹತ್ಯೆಯ ಬಳಿಕ ಆರೋಪಿಗಳು ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಲು ಕ್ಲೀನಿಂಗ್ ಲಿಕ್ವಿಡ್ ಬಳಸಿದ್ದು, ಬಳಸಿದ ಆಯುಧಗಳನ್ನು ತೊಳೆದು ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಹತ್ಯೆಯ ನಂತರ ಶ್ವೇತಾ ಮತ್ತು ಕೆನ್ನೆತ್ ಅಪಾರ್ಟ್‌ಮೆಂಟ್‌ನ ಮೇಲ್ಛಾವಣಿಗೆ ತೆರಳಿ, ಪಕ್ಕದ ಕಟ್ಟಡಗಳ ಟೆರೇಸ್‌ಗಳ ಮೂಲಕ ಜಿಗಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Did she kill her parents and sister with her lover? Shocking triple murder – ತುಳುಟೈಮ್ಸ್

ಇದನ್ನೂ ಓದಿ :ಬಿಯರ್‌ಗೆ ಹೆಚ್ಚಿದ ಬೇಡಿಕೆ; ತಿಂಗಳಲ್ಲೇ ₹484 ಕೋಟಿ ಹೆಚ್ಚುವರಿ ಆದಾಯ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtube.com/shorts/8R4FaGkzmPc?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page