Madikeri : ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025 ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಜಿ.ಪಂ. ಸಿಇಒ ಆನಂದ ಪ್ರಕಾಶ್ ಮೀನಾ , ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ವಿವಿಧ ಸಾಧನೆ ಮಾಡಬೇಕಾದರೆ ಒಳ್ಳೆಯ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳುವಂತಾಗಬೇಕು ಎಂದರು.
ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮಾತನಾಡಿ, ಪ್ರತೀ ವರ್ಷವೂ ನವೆಂಬರ್ 14 ರಿಂದ ಒಂದು ವಾರ ಕಾಲ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ನಡೆಸಲಾಗುತ್ತದೆ. ನೆಹರೂ ಅವರ ಜನ್ಮದಿನಾಂಕದಿಂದ ಇದು ಒಂದು ವಾರ ನಡೆಯುತ್ತದೆ ಎಂದರು.
ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹರೆಂದೇ ಹೆಸರಾದ ದಿವಂಗತ ಡಾ.ಎಸ್.ಆರ್.ರಂಗನಾಥನ್ ಅವರ ನೆನಪಿನಲ್ಲಿ ಈ ಸಪ್ತಾಹ ನಡೆಸಲಾಗುತ್ತದೆ. ಗ್ರಂಥಾಲಯ ವಿದ್ವಾಂಸರಾದದ್ದು ಆನಂತರ, ಮೂಲತಃ ಅವರು ಖ್ಯಾತ ಗಣಿತಶಾಸ್ತ್ರಜ್ಞರೂ ಶಿಕ್ಷಣ ತಜ್ಞರೂ ಆಗಿದ್ದರು. ಕರ್ನಾಟಕದ ಮಂಗಳೂರಿನ ಸರಕಾರಿ ಕಾಲೇಜಿನಲ್ಲೂ ಅವರು ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರೆಂಬುದು ಕನ್ನಡದ ಹೆಮ್ಮೆ. ಅವರು ಗ್ರಂಥಾಲಯಗಳ ವಿಕಾಸಕ್ಕೆ ತಮ್ಮ ಅರಿವಿನ ಮೂಲಕ ಹೊಸ ನಿಯಮಗಳನ್ನು ರೂಪಿಸಿ ಒಂದು ಚೌಕಟ್ಟನ್ನು ಹಾಕಿ ಕೊಟ್ಟವರು ಎಂದು ನುಡಿದರು.
ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹರೆಂದೇ ಹೆಸರಾದ ದಿವಂಗತ ಡಾ.ಎಸ್ ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಸುರೇಖಾ ಸ್ವಾಗತಿಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಂಚಾರಿ ಗ್ರಂಥಾಲಯ ಮೇಲ್ವಿಚಾರಕರಾದ ನಾಗವೇಣಿ ಪ್ರಾರ್ಥಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದನ್ನೂ ಓದಿ :Technology: ಮನುಷ್ಯರು 150 ವರ್ಷ ಬದುಕುವ ಮಾತ್ರೆ ಅಭಿವೃದ್ಧಿಪಡಿಸಿದ ಚೀನಾ..!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/y-ir1Jy2T40?si=90oupIZX6wzeX976











