Devotional : ಪಂಚಪಾಂಡವರ ತಾಯಿ ಕುಂತಿಯ ಬಗ್ಗೆ ತಿಳಿಯದವರೇ ಇಲ್ಲ. ಹಾಗೇ ಈ ತಾಯಿಯನ್ನು ಪೂಜಿಸುತ್ತಾರೆ ಅನ್ನೋ ವಿಷಯ ಕೆಲವರಿಗೆ ಗೊತ್ತೇ ಇಲ್ಲ. ಹೌದು… ! ಕುಂತಿ ದೇವಿಯ ಪೂಜೆ ಎನ್ನುವುದು ಕೆಲವು ಗ್ರಾಮೀಣ ಮತ್ತು ಪಾರಂಪರಿಕ ಸಂಪ್ರದಾಯಗಳಲ್ಲಿ ಕಾಣುವ ಸ್ಥಳೀಯ ಶಕ್ತಿ ಆರಾಧನೆ. ಇದನ್ನು ಕೆಲವಡೆ ಕುಂತಿಯಮ್ಮ, ಕುಂತಿ ಅಮ್ಮನವರು, ಕುಂತಿಯತೈ, ಕುಂತಿದೇವತೆ ಎಂಬ ಹೆಸರಿನಿಂದ ಕರೆದರೂ, ಪ್ರದೇಶಾನುಸಾರ ಕಥೆಗಳು ಮತ್ತು ಆಚರಣೆ ವಿಧಾನಗಳು ಸ್ವಲ್ಪ ಬದಲಾಗುತ್ತವೆ. ಕೆಲವರು ಮಹಾಭಾರತದ ಕುಂತಿ ದೇವಿಯನ್ನು ಶಕ್ತಿ ರೂಪವಾಗಿ ಪೂಜಿಸಿದರೆ, ಇನ್ನು ಕೆಲವರು ಗ್ರಾಮ ದೇವತೆ ಅಥವಾ ಭೂ ಶಕ್ತಿದೇವತೆಯಾಗಿಯೂ ಪೂಜಿಸುತ್ತಾರೆ.
ಸಮುದಾಯಗಳ ಆತ್ಮೀಯತೆಯನ್ನು ಸಾರುತ್ತವೆ ;
ಆದರೆ ಇಲ್ಲೊಂದು ಗ್ರಾಮದಲ್ಲಿ ವಿಶೇಷವಾಗಿ ಕುಂತಿ ದೇವಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಹೌದು… ಚಿಕ್ಕಾಟಿ ಗ್ರಾಮದಲ್ಲಿ ತಲೆಮಾರುಗಳಿಂದ ಮುಂದುವರಿದ ಈ ಕುಂತಿ ದೇವಿಯ ಪೂಜೆ, ಗ್ರಾಮಸ್ಥರ ನಂಬಿಕೆ ಮತ್ತು ಸಮುದಾಯದ ಆತ್ಮೀಯತೆಯ ಪ್ರಮುಖ ಸಂಕೇತವಾಗಿಯೇ ಉಳಿದಿದೆ. ಇಲ್ಲಿನ ಈ ಆರಾಧನೆಯ ವಿಶೇಷವೆಂದರೆ, 12 ವರ್ಷದೊಳಗಿನ ಹೆಣ್ಣುಮಕ್ಕಳು ಈ ಪೂಜೆಯಲ್ಲಿ ಭಾಗಿಯಾಗುವುದು ಹಾಗೂ ಮನೆಮನೆಗಳಿಂದ ತಂದ ಹೂವುಗಳಿಂದ ದೇವಿಗೆ ಅಲಂಕಾರ ಮಾಡುವುದರ ಜೊತೆಗೆ ದೀಪ ಹಚ್ಚಿ, ಪ್ರಸಾದವನ್ನು ಅರ್ಪಣೆ ಮಾಡುತ್ತಾರೆ. ನಂತರ ಮಕ್ಕಳು ಕುಂತಿ ದೇವಿಗೆ ಪದಹಾಡಿ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾರ್ತಿಕ ಮಾಸದಲ್ಲಿ ಕುಂತಿ ದೇವಿಯ ಪೂಜೆ ವ್ಯಾಪಕವಾಗಿ ನಡೆಯುತ್ತದೆ.
ಪುರಾಣ ಹಿನ್ನಲೆ :
ಮಹಾಭಾರತದಲ್ಲಿ ಪಾಂಡವರ ತಾಯಿ ಕುಂತಿ, ನಾರದ ಮಹರ್ಷಿಗಳ ಸಲಹೆಯ ಮೇರೆಗೆ ಗಜಗೌರಿ ವ್ರತವನ್ನು ಆಚರಿಸುತ್ತಾಳೆ. ಇದಕ್ಕೆ ಅಗತ್ಯವಾದ ಹಣ್ಣು–ತರಕಾರಿಗಳನ್ನು ಸ್ವರ್ಗದಿಂದಲೇ ತಂದುಕೊಡುವ ಜವಾಬ್ದಾರಿಯನ್ನು ಅರ್ಜುನ ವಹಿಸುತ್ತಾನೆ. ಅರ್ಜುನನು ಕಾಮಧೇನು ಮತ್ತು ಕಲ್ಪವೃಕ್ಷದ ನೆರವಿನಿಂದ ಭೂಮಿಯಲ್ಲಿ ಲಭ್ಯವಿರದ ಹಣ್ಣು–ತರಕಾರಿಗಳನ್ನು ತಂದು, ಕುಂತಿಯ ವ್ರತವನ್ನು ಯಶಸ್ವಿಗೊಳಿಸುತ್ತಾನೆ. ಈ ಕಾರಣಕ್ಕೆ ಕುಂತಿಯ ಈ ವ್ರತವನ್ನು ಗೌರವವಾಗಿ ನೆನಪಿಸಿಕೊಳ್ಳುವ ಸಂಕೇತವಾಗಿ ಜನರು ಇಂದಿಗೂ ಕುಂತಿ ದೇವಿಯ ಆರಾಧನೆ ಮಾಡುತ್ತಾರೆ. ಮಾಸಪೂರ್ತಿ ನಡೆಯುವ ಈ ಆರಾಧನೆ ಗ್ರಾಮಸ್ಥರ ಏಕತೆ, ಸಂಪ್ರದಾಯ, ಸಂಸ್ಕೃತಿ, ಸಂರಕ್ಷಣೆ ಮಕ್ಕಳಿಗೆ ಭಕ್ತಿಯ ಪಾಠ, ಕುಟುಂಬ-ಸಮಾಜದ ಒಗ್ಗಟ್ಟಿನ ಸಂಕೇತ ಎಂಬ ಮೌಲ್ಯಗಳನ್ನು ಜೀವಂತವಾಗಿರಿಸುತ್ತದೆ. ಕುಂತಿ ದೇವಿಯನ್ನೂ ಇಂದಿಗೂ ನೆನಪಿನಲ್ಲಿರಿಸಿ ಪೂಜೆ ಸಲ್ಲಿಸುತ್ತಿರುವುದು ವಿಶೇಷವೆಂದೇ ಹೇಳಬಹುದು.
ಇದನ್ನೂ ಓದಿ :Belthangady: ಪೈಂಟಿಂಗ್ ವೇಳೆ ಕುಸಿದು ಬಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತ್ಯು
……….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vXhwD33EPDk?si=9-p-hEdxSIH5NIgZ











