ಕರ್ನಾಟಕ : Tulu Times l ಕರಾವಳಿ ಭಾಗಗಳಲ್ಲಿ ಬಿಸಿಲಿನ ತೀವ್ರತೆ ದಿನೇ ದಿನೇ ಹೆಚ್ಚುತ್ತಿದ್ದು, ಜನಜೀವನದ ಮೇಲೆ ಅದರ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದೆ. ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಏರಿಳಿತಗಳು ಕಂಡುಬರುತ್ತಿದ್ದು, ಹವಾಮಾನ ಅಸ್ಥಿರತೆ ಮುಂದುವರಿದಿದೆ.
ಕಳೆದ ಒಂದು ವಾರದಿಂದ ಬೆಳಗಿನ ವೇಳೆಯಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿದ್ದು, ಕೆಲವೆಡೆ ಸಣ್ಣ ತುಂತುರು ಮಳೆಯೂ ದಾಖಲಾಗಿದೆ. ಆದರೆ ಬೆಳಗ್ಗೆ ಸುಮಾರು 10 ಗಂಟೆಯ ನಂತರ ಬಿಸಿಲು ತೀವ್ರವಾಗುತ್ತಿದ್ದು, ದಿನಪೂರ್ತಿ ಉಷ್ಣತೆ ಮುಂದುವರಿಯುತ್ತಿದೆ. ಸಂಜೆ ವೇಳೆಯಲ್ಲಿ ಮತ್ತೆ ಮೋಡ ಕವಿದ ವಾತಾವರಣ ಹಾಗೂ ಗಾಳಿಯ ಜೋರಿನೊಂದಿಗೆ ಕೆಲವು ಭಾಗಗಳಲ್ಲಿ ತಂಪಿನ ಅನುಭವ ಕಂಡರೂ, ವ್ಯಾಪಕ ಮಳೆಯ ಕೊರತೆ ಮುಂದುವರಿದಿದೆ.
ಇತ್ತೀಚಿನ ದಿನಗಳಲ್ಲಿ ಕರಾವಳಿಯ ಗಾಳಿಯ ದಿಕ್ಕು ಬದಲಾಗಿರುವುದು ಪ್ರಮುಖ ಕಾರಣವೆಂದು ತಜ್ಞರು ತಿಳಿಸಿದ್ದಾರೆ. ಗಾಳಿಯು ಈಗ ಅರೇಬಿಯನ್ ಸಮುದ್ರದಿಂದ ಬೆ ಆಫ್ ಬೆಂಗಾಲ್ ಕಡೆಗೆ ಬೀಸುತ್ತಿರುವುದರಿಂದ ಮಳೆ ತರಬಲ್ಲ ವ್ಯವಸ್ಥೆಗಳು ಇಲ್ಲಿನ ಪ್ರದೇಶದಲ್ಲಿ ರೂಪುಗೊಳ್ಳುತ್ತಿಲ್ಲ. ಇಲ್ಲಿ ರೂಪುಗೊಳ್ಳುವ ಮೋಡಗಳು ತಮಿಳುಮಾಡು ಕಡೆಗೆ ಸರಿದು ಅಲ್ಲಿ ಮಳೆಯಾಗುತ್ತಿರುವುದು ಗಮನಾರ್ಹವಾಗಿದೆ.
ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಉತ್ತಮ ಪೂರ್ವಮಾನ್ಸೂನ್ ಮಳೆಯಾಗುತ್ತದೆ. ಆದರೆ ಈ ಬಾರಿ ಕರಾವಳಿ ಭಾಗದಲ್ಲಿ ಮಳೆಯ ಕೊರತೆ ಹೆಚ್ಚಾಗಿದೆ. ಕಳೆದ ವಾರದ ಅಂಕಿಅಂಶಗಳ ಪ್ರಕಾರ, ಕರಾವಳಿ ಪ್ರದೇಶದಲ್ಲಿ ಶೇಕಡಾ 71ರಷ್ಟು ಮಳೆಯ ಕೊರತೆ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ 98%, ದಕ್ಷಿಣ ಕನ್ನಡದಲ್ಲಿ 93% ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 22% ಮಳೆಯ ಕೊರತೆ ಕಂಡುಬಂದಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಸುಮಾರು 5.3 ಮಿಮೀ ಮಳೆಯಾಗಬೇಕಾಗಿದ್ದರೂ, ಕೇವಲ 1.6 ಮಿಮೀ ಮಾತ್ರ ದಾಖಲಾಗಿದೆ.
ಈ ನಡುವೆ ಕೇರಳ ರಾಜ್ಯದಲ್ಲಿಯೂ ಉಷ್ಣತೆಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರಿಗೆ ಮುನ್ನೆಚ್ಚರಿಕಾ ಸೂಚನೆಗಳನ್ನು ನೀಡಿದೆ. ತೀವ್ರ ಬಿಸಿಲು ಮತ್ತು ಉಷ್ಣ ಗಾಳಿಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಮಧ್ಯಾಹ್ನ 12ರಿಂದ 3 ಐ ಹೊರಗೆ ಹೋಗುವುದನ್ನು ತಪ್ಪಿಸುವುದು, ಸಾಕಷ್ಟು ನೀರು ಕುಡಿಯುವುದು, ಹಗುರವಾದ ಹತ್ತಿ ಬಟ್ಟೆ ಧರಿಸುವುದು ಮುಖ್ಯ. ಹೊರಗೆ ಹೋಗುವಾಗ ನೀರು ಕರೆದೊಯ್ಯುವುದು, ಮದ್ಯ, ಟೀ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ತಪ್ಪಿಸುವುದು ಹಾಗೂ ಹೊಸದಾಗಿ ತಯಾರಿಸಿದ ಆಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತು.
Mangaluru: Intense heat increases – Temperature fluctuations continue in coastal districts – ತುಳುಟೈಮ್ಸ್
ಇದನ್ನೂ ಓದಿ :ಐಪಿಎಲ್ 2026ರಲ್ಲಿ 15ರ ಹರೆಯದ ವೈಭವ್ ಸೂರ್ಯವಂಶಿ ಸಂಚಲನ
==
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/sFhnDt1F1kE?si=MOq7UUEaEVOKCRnG











