Winter Season : ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆಗಾಲ ಈ ಮೂರು ಕಾಲದ ಬದಲಾವಣೆಯಾಗುವಾಗ ದೇಹ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತವೆ. ಕೆಲವೊಮ್ಮೆ ವಿಪರೀತ ಅಸೌಖ್ಯ ಉಂಟಾಗಬಹುದು, ಇನ್ನೂ ಕೆಲವೊಮ್ಮೆ ದೇಹದಲ್ಲಿ ನಿಶ್ಯಕ್ತಿ ಹೀಗೇ ದೈಹಿಕ ಸಮಸ್ಯೆಗಳು ಉಂಟಾಗುತ್ತವೆ. ಅದೇ ರೀತಿ ಚಳಗಾಲದಲ್ಲಿ ಮಕ್ಕಳ ಆರೋಗ್ಯದಲ್ಲಿ ಬದಲಾವಣೆಯಾಗುತ್ತವೆ. ಅದಕ್ಕಾಗಿ ಮುಂಚಿತವಾಗಿ ನಾವು ಕೆಲವೊಂದು ಆಹಾರ ಪದ್ಧತಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಬೇಸಿಗೆಗಾಲದಲ್ಲಿ ತಂಪನ್ನು ನಾವು ಬಯಸಿದರೆ, ಮಳೆಗಾಲ ಹಾಗೂ ಬೇಸಿಗೆಗಾಲದಲ್ಲಿ ಬಿಸಿಯಾದ ಆಹಾರ ಕ್ರಮಗಳನ್ನು ಅನುಸರಿಸುತ್ತೇವೆ.
ದೇಹವನ್ನು ಒಳಗಿನಿಂದ ಬೆಚ್ಚಗಿರಿಸಲು ಅಂಜೂರದ ಲಡ್ಡು ಸೇವಿಸಿ ;
ಚಳಿಗಾಲದಲ್ಲಿ ಅಂಜೂರದ ಲಡ್ಡು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಈ ಲಡ್ಡುವನ್ನು ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ. ಇದು ಚಳಿಗಾಲದಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಿರಿಸುತ್ತದೆ. ರಕ್ತಹೀನತೆ, ಜೀರ್ಣಕ್ರಿಯೆ, ಮಲಬದ್ಧತೆ ಸಮಸ್ಯೆ, ಕರುಳಿನ ಆರೋಗ್ಯ, ತೂಕ ನಿಯಂತ್ರಣ, ತ್ವಚೆ ಮತ್ತು ಕೂದಲಿನ ಆರೋಗ್ಯ, ಚರ್ಮದ ಕಾಂತಿ ಕಾಪಾಡುವಲ್ಲಿ ಅಂಜೂರದ ಲಡ್ಡು ಸಹಾಯಕವಾಗಿದೆ.
ಅಂಜೂರದ ಲಡ್ಡು ಮಾಡಲು ಬೇಕಾಗುವ ಸಾಮಾಗ್ರಿಗಳು ;
ಒಣ ಅಂಜೂರ 10 ರಿಂದ 15 ಫೀಸ್, ಕತ್ತರಿಸಿದ ಬಾದಾಮಿ ಹಾಗೂ ಖರ್ಜೂರ, ಗೋಡಂಬಿ 4 ಕಪ್, ಪಿಸ್ತಾ 2 ಟೇಬಲ್ ಸ್ಪೂನ್, ವಾಲ್‌ನಟ್ 2 ಟೇಬಲ್ ಸ್ಪೂನ್, ತುಪ್ಪ 2 ಟೇಬಲ್ ಸ್ಪೂನ್ ಹಾಗೂ ಏಲಕ್ಕಿ ಪುಡಿ.
ಲಡ್ಡು ತಯಾರಿಸುವ ವಿಧಾನ ;
ಮೊದಲು ಅಂಜೂರ ಮತ್ತು ಖರ್ಜೂರವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಲೆ ಮೇಲೆ ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ವಾಲ್‌ನಟ್ಸ್ ಹಾಕಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ. ಬಳಿಕ ಅದೇ ಪಾತ್ರೆಗೆ ಅಂಜೂರ ಮತ್ತು ಖರ್ಜೂರವನ್ನು ಹಾಕಿ, ಅವು ಮೃದುವಾಗುವವರೆಗೆ ೪ ರಿಂದ ೫ ನಿಮಿಷಗಳ ಕಾಲ ಬೇಯಿಸಿ. ನಂತರ ಕತ್ತರಿಸಿದ ಡ್ರೈ ಫ್ರೂಟ್ಸ್ ಮತ್ತು ಏಲಕ್ಕಿ ಪುಡಿಯನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ಬೆಂಕಿ (ಸ್ಟವ್) ಆರಿಸಿ, ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಟ್ಟು, ನಂತರ ಕೈಗೆ ತುಪ್ಪ ಸವರಿ ಸಣ್ಣ ಲಡ್ಡುಗಳನ್ನಾಗಿ ತಯಾರಿಸಿ. ಕೆಲವೊಮ್ಮೆ ಈ ಲಡ್ಡುಗಳಿಗೆ ಬಿಳಿಎಳ್ಳಿನ ಮಿಶ್ರಣ ಮಾಡಲಾಗುತ್ತದೆ. ಇದು ನಿಮ್ಮ ಆಯ್ಕೆ, ನಿಮ್ಮ ರುಚಿಗೆ ಬಿಟ್ಟದ್ದು.
ಒಣ ಅಂಜೂರ ಮತ್ತು ಖರ್ಜೂರದಿಂದ ತಯಾರಿಸಿದ ಈ ರುಚಿಕರ ರೆಸಿಪಿಗೆ ಸಕ್ಕರೆ ಅಥವಾ ಬೆಲ್ಲದ ಅಗತ್ಯವಿಲ್ಲ. ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ವಾಲ್ನಟ್ಸ್ ನಂತಹ ಡ್ರೈ ಫ್ರೂಟ್ಸ್ ಜೊತೆಗೆ ಅಂಜೂರ ಮತ್ತು ಈ ಲಡ್ಡುಗಳು ತಿಂದರೆ ನಿಮ್ಮನ್ನು ಆರೋಗ್ಯವಾಗಿ ಇರಿಸುತ್ತವೆ ಮತ್ತು ಶಕ್ತಿಯನ್ನೂ ನೀಡುತ್ತವೆ. ಇವು ತುಂಬಾ ರುಚಿಕರವಾಗಿರುವುದರಿಂದ ಮಕ್ಕಳು ಮತ್ತು ದೊಡ್ಡವರು ಎಲ್ಲರಿಗೂ ತಿನ್ನಲು ಇಷ್ಟವಾಗುತ್ತವೆ. ಅತ್ಯುತ್ತಮ ವಿಚಾರವೆಂದರೆ, ಇದನ್ನು ತಯಾರಿಸುವುದು ತುಂಬಾ ಸುಲಭ ಮತ್ತು ಇದನ್ನು ಮೊದಲೇ ಮಾಡಿಟ್ಟುಕೊಂಡರೆ ತಿಂಗಳಾನುಗಟ್ಟಲೆ ಉಪಯೋಗಿಸಬಹುದು (ಭದ್ರವಾದ ಮುಚ್ಚಳವಿರುವ ಭರಣಿಗಳಲ್ಲಿ ತುಂಬಿಸಿ) ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಚಾರವೆಂದರೆ ದಿನಕ್ಕೆ ಕೇವಲ ಒಂದು ಅಂಜೂರದ ಲಡ್ಡು ಮಾತ್ರ ತಿನ್ನಬೇಕೇ ಹೊರತು, ಎರಡು ಅಥವಾ ಮೂರಲ್ಲ. ನೀವು ಒಂದಕ್ಕಿಂತ ಜಾಸ್ತಿ ಲಡ್ಡನ್ನು ಇಷ್ಟಪಟ್ಟು ತಿಂದರೆ ಮಲಬದ್ಧತೆ, ಹೊಟ್ಟೆನೋವು ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಹಾಗಾಗಿ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ ಎಂದು ಅಗತ್ಯಕ್ಕಿಂತ ಜಾಸ್ತಿ ಕೊಡಬೇಡಿ.
ಇದನ್ನೂ ಓದಿ :Shiradi Ghat Temple: ತುಳುನಾಡ ಕಾರ್ಣಿಕದ ಕ್ಷೇತ್ರ ಶಿರಾಡಿ ಗಡಿ ಚೌಡೇಶ್ವರಿ ಅಮ್ಮ..!
………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=WPztUDdm0DT7ADa0











