ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಧಾರ್ಮಿಕ

Shiradi Ghat Temple: ತುಳುನಾಡ ಕಾರ್ಣಿಕದ ಕ್ಷೇತ್ರ ಶಿರಾಡಿ ಗಡಿ ಚೌಡೇಶ್ವರಿ ಅಮ್ಮ..!

Shiradi Ghat Temple: ನಮ್ಮ ಕರುನಾಡು ಎಂದರೆ ಒಂದೇ ರಾಜ್ಯ, ಹಲವು ಜಗತ್ತು, ವಿವಿಧತೆಯಲ್ಲಿ ಏಕತೆ ಈ ಮಣ್ಣಿನ ಗುಣ. ಮುಖ್ಯ ಭಾಷೆ ಕನ್ನಡವಾದರೂ ಇಲ್ಲಿ ವಿಭಿನ್ನ ಸಂಸ್ಕೃತಿ ಹೊಂದಿರುವ ತುಳು ಭಾಷೆಯೂ ಇವೆ. ಇಂತಹುದೇ ಒಂದು ವಿಭಿನ್ನ ಪ್ರದೇಶ ತುಳು- ಕನ್ನಡ ನಾಡುಗಳನ್ನು ಬೆಸೆಯುವ ‘ಗಡಿ’ ಮತ್ತು ಅಲ್ಲಿರುವ ವಿಶೇಷತೆ. ಇದನ್ನು ತುಳುವರು ‘ಗಡಿ’ ಎಂದು ಕರೆಯುತ್ತಾರೆ. ಚಾರ್ಮಾಡಿ ಮತ್ತು ಶಿರಾಡಿಯಲ್ಲಿರುವ ಕಾರ್ಣಿಕದ ದೇವಸ್ಥಾನಗಳು ಭಕ್ತರ ಪಾಲಿನ ನೆಮ್ಮದಿಯ ತಾಣಗಳಾಗಿವೆ.

 

ಗುಂಡ್ಯ ಕಾಡಿನ ಮಧ್ಯೆ ನೆಲೆಸಿರುವ ದೇವತೆ..!

ಶಿರಾಡಿ ಗಡಿ ದಾಟುತ್ತಾ ಹೋಗುವಾಗ ಚೌಡೇಶ್ವರಿ ದೇವಿ ದೇವಸ್ಥಾನ ರಸ್ತೆಬದಿಯಲ್ಲಿ ಕಾಣುತ್ತದೆ. ಇಲ್ಲಿನ ಚೌಡೇಶ್ವರಿಯನ್ನು ‘ಗಡಿ ದೇವತೆ’ ಎಂದು ಕರೆಯಲಾಗುತ್ತದೆ. ಇದು ಸಕಲೇಶಪುರ, ಶನಿವಾರಸಂತೆ, ಹೆತ್ತೂರು, ವನಗೂರು ಜನ ನಂಬುವ ದೇವತೆ. ಈ ಕಡೆ ಸುಬ್ರಮಣ್ಯ, ಕುಲ್ಕುಂದ ಜನ ಕೂಡ ಆರಾಧಿಸುವ ದೇವತೆ. ಜನರು ತಮ್ಮ ಕಷ್ಟಗಳಿಗೆ ಹರಕೆ ಹೇಳಿ ಶುಕ್ರವಾರ, ಮಂಗಳವಾರ, ಭಾನುವಾರ ಹಾಗೂ ವಿಶೇಷವಾಗಿ ಆಟಿ ಅಮಾವಾಸ್ಯೆ, ಸೋಣ ಅಮಾವಾಸ್ಯೆ, ಪತ್ತನಾಜೆಯಂದು ಕೋಳಿ, ಕುರಿ, ಹಂದಿಯನ್ನು ಗುಡಿಯ ಎದುರಿನ ಕಟ್ಟೆಯ ಕಲ್ಲಿಗೆ ಕೊಯ್ದು ಬಿಂಧು ಸೇವೆ ಸಲ್ಲಿಸಿ ಮನೆಗಳಿಗೆ ಕೊಂಡುಹೋಗುತ್ತಾರೆ.

ಹರಕೆ ಹೇಳಿದರೆ ಚೌಡೇಶ್ವರಿ ಕಾಪಾಡುತ್ತಾಳೆ..!

ಹೆಚ್ಚಿನವರು  ಅಲ್ಲೇ ಕೆಳಗೆ ಹರಿಯುವ ಕುಮಾರಧಾರ ನದಿ ಸಮೀಪ ಅಡಿಗೆ ಮಾಡುವ ಪದ್ಧತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ನಕ್ಸಲ್ ಸಮಸ್ಯೆ ಆಗಾಗ ಇಲ್ಲಿ ಕಾಡುತ್ತಿರುತ್ತದೆ. ಹಾಗಾಗಿ ಅರಣ್ಯ ಇಲಾಖೆಯ ನೇತೃತ್ವದಲ್ಲೇ ಇಲ್ಲಿನ ಪೂಜೆ , ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಹಾಗೆಯೇ ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ತೆರಳುವ ಮಂದಿ ಒಮ್ಮೆಯಾದರೂ ಈ ಅಮ್ಮನ ಸ್ಥಳದಲ್ಲಿ ಬಂದು ಗಾಡಿ ನಿಲ್ಲಿಸಿ ಪೂಜೆ ಮಾಡಿಸಿಯೇ ಹೋಗಬೇಕು ಎಂದು ಸ್ಥಳೀಯರು ಹೇಳುತ್ತಾರೆ.  ಈ ಪರಿಸರದ ಸುತ್ತಮುತ್ತಲಿನ ಊರುಗಳನ್ನು ಚೌಡೇಶ್ವರಿ ದೇವಿ ಕಾಪಾಡುತ್ತಾಳೆ ಎಂಬ ನಂಬಿಕೆ ಇದೆ. ಹಾಗೆಯೇ ಮಹಾನವಮಿ ದಿನ ಈ ಸ್ಥಳಕ್ಕೆ ಬಂದು ಗಾಡಿ ಪೂಜೆ ಮಾಡಿಸಿದರೆ ಸಕಲ ಕಷ್ಟಗಳು, ಮಾಟ ಮಂತ್ರ ಇತ್ಯಾದಿ ತಗುಲಿದ್ರೆ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಮದುವೆಯಾಗದೇ ಇರುವ ಮಂದಿ ಚೌಡೇಶ್ವರಿ ಅಮ್ಮನಿಗೆ ಹರಕೆ ಹೇಳಿಕೊಂಡರೆ ಬೇಗ ಮದುವೆಗೆ ಭಾಗ್ಯ ಲಭಿಸುತ್ತದೆ. ದೇವಿಗೆ ಸೀರೆ ತಂದು ಪೂಜೆ ಮಾಡಿದರೆ ಆಕೆ ತೃಪ್ತಿಯಾಗುತ್ತಾಳೆ. ಹೀಗೆ ಅನೇಕ ಹೆಣ್ಣು ಮಕ್ಕಳು ಈ ಸ್ಥಳಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ.

ಪ್ರಕೃತಿಯ ಅಂದಕ್ಕೆ ಫಿದಾ ಆಗ್ತೀರಿ..!

ಇನ್ನು ಈ ಸ್ಥಳ ಪ್ರವಾಸಿ ತಾಣವಾಗಿಯೂ ಗಮನಸೆಳೆಯುತ್ತಿದೆ. ಸುತ್ತಲೂ ಹರಿಯುವ ನದಿ.  ಇದು ಸಕಲೇಶಪುರ ತಾಲ್ಲೂಕಿನ ಹಾನುಬಾಲು ಹೋಬಳಿಗೆ ಸೇರಿದೆ. ದೇವಿ ಚೌಡೇಶ್ವರಿ ಪೂರ್ವಕ್ಕೆ ಮುಖ ಮಾಡಿದೆ. ಒಂದು ಸಣ್ಣ ಸೇವಾ ಕೌಂಟರ್ ಕೂಡ ಇದೆ. ಈ ಸ್ಥಳವು ಗುಂಡ್ಯ ಫಾರೆಸ್ಟ್ ಗೇಟ್‌ನಿಂದ ಸುಮಾರು 9 ಕಿ.ಮೀ ದೂರದಲ್ಲಿದೆ. ದೇವಾಲಯದ ಪಕ್ಕದಲ್ಲಿ ಗುಂಡ್ಯ ನದಿ ಹರಿಯುತ್ತದೆ. ಮೇಲೆ ಬೆಟ್ಟಗಳನ್ನು ವೀಕ್ಷಿಸಿದಾಗ ರೈಲ್ವೇ ಮಾರ್ಗ ಗೋಚರಿಸುತ್ತದೆ. ಹಾಗೆಯೇ ರೈಲುಗಳು ಓಡಾಡುವುದು ಕಣ್ಣಿಗೆ ಮುದ ನೀಡುತ್ತದೆ. ಇನ್ನು ಕಾಡು ನೋಡುವುದಂತೂ ಪ್ರಕೃತಿ ಪ್ರೇಮಿಗಳಿಗೆ ಸಂಭ್ರಮ.  ನೀವು ಕೂಡ ಒಮ್ಮೆ ಭೇಟಿ ನೀಡಿ..!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page