ಬೆಳ್ತಂಗಡಿ : Tulu Times l ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಟ್ಟ ಗ್ರಾಮ ಕರಾಯ. ಇಲ್ಲಿ ಸುಮಾರು ಏಳು ಶತಮಾನಗಳಷ್ಟು ಹಳೆಯ ದೇವಾಲಯವಿದೆ. ಇಲ್ಲಿಯ ಪ್ರಧಾನ ಆರಾಧ್ಯ ದೇವರು ಶ್ರೀ ಮಹಾಲಿಂಗೇಶ್ವರ, ಕರಾಯ ಮತ್ತು ‘ಮಹಾಲಿಂಗ’.
ಕರಾಯ ಹೆಸರಿನ ಹಿನ್ನೆಲೆ : ಒಂದು ಬಾರಿ ಕುಂಬಾರರು ಮಡಕೆ(ಕರ)ಗಳನ್ನು ಆವಿಗೆಯಲ್ಲಿ ಕಟ್ಟಿ ನೆಲದ ಮೇಲೆ ಒಣಗಿಸಲೆಂದು ಕೌಚಿಟ್ಟಿದ್ದರು. ಒಣಗಿದ ಬಳಿಕ ‘ಕರ’ಗಳನ್ನು ಒಂದೊಂದಾಗಿ ಎತ್ತಿ ಅಚ್ಚುಕಟ್ಟಾಗಿ ಒಟ್ಟತೊಡಗಿದರು. ಕೊನೆಯ ಹಂತದಲ್ಲಿ ಒಂದು ಮಡಿಕೆ ಉಳಿದಿತ್ತು. ಅದನ್ನು ಎತ್ತಲು ತೊಡಗಿದಾಗ ಅದು ನೆಲಬಿಟ್ಟು ಕದಲಲೇ ಇಲ್ಲ. ಶಕ್ತಿಮೀರಿ ಕೀಳತೊಡಗಿದಾಗಲೂ ಆದು ಅಲುಗಾಡಲಿಲ್ಲ ಗಾಬರಿಗೊಂಡ ಕುಂಬಾರರು ಬಾವಂತಬೆಟ್ಟುವಿನ ಯಜಮಾನನ ಬಳಿ ಮೊರೆಯಿಟ್ಟರು. ಯಜಮಾನ ಗುತ್ತಿನ ಗುರಿಕಾರರನ್ನು ಕೂಡಿಕೊಂಡು ಅಲ್ಲಿಗೆ ಧಾವಿಸಿ ಬಂದರು. ಮಡಕೆಯನ್ನು ಎತ್ತಲು ಆಪ್ಪಣೆ ಕೊಟ್ಟರೂ ಮಡಕೆ ಕದಲಲಿಲ್ಲ. ಮಡಕೆ ನಿಶ್ಚಲವಿತ್ತು. ಯಜಮಾನರು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ದೇವರ ಮಹಿಮೆಯೆಂದು ತಿಳಿದು ಭಯಭಕ್ತಿಗಳಿಂದ ಕೈಮುಗಿದು ಮುಂದಿನ ಕಾರ್ಯವನ್ನು ಯೋಚಿಸಲು ಹಿಂತಿರುಗಿದರು. ಈ ಅದ್ಭುತಕ್ಕೆ ಬೆರಗುಗೊಂಡ ತುಳುವರು ಇದು ಯಾವ ಮಡಕೆ ಎಂದು ಹೇಳುತ್ತಾ ಮನೆ ಸೇರಿದರು.

ಮರುದಿನ ಯಜಮಾನರು ಪರಿವಾರದೊಂದಿಗೆ ಅಲ್ಲಿಗೆ ಬಂದರು. ಅದ್ಭುತ, ಆಶ್ಚರ್ಯ ಕಾದಿತ್ತು. ಮಡಕೆಯ ಮಣ್ಣು ಮಂಜಿನಿಂದ ಕರಗಿ ಕೆಳಗೆ ಸುತ್ತಲು ಚೆಲ್ಲಿತ್ತು. ಅದರ ನಡುವೆ ಲಿಂಗಾಕಾರದ ಶಿಲೆಯ ಖಂಡವೊಂದು ತಲೆಎತ್ತಿ ನಿಂತಿತ್ತು. ನಂತರ ಅಲ್ಲಿಯೇ ಮಂತ್ರಾಲೋಚನೆಯೊಂದಿಗೆ ದೇವರಿಗೊಂದು ಗುಡಿ ಕಟ್ಟಿಸಿ ನಿತ್ಯ ಪೂಜೆ ಏರ್ಪಾಡು ಮಾಡಲಾಗಿತ್ತು. ಅಲ್ಲಿಂದ ನಂಬಿಕೊಂಡು ಬಂದಿರುವ ದೇವರೇ ಮುಂದೆ ಕರಾಯ ಎನಿಸಿ ಪೂಜಿಸಲ್ಪಟ್ಟಿತು. ಇದೀಗ ನೂತನ ಬ್ರಹ್ಮರಥದೊಂದಿಗೆ ಸುತ್ತಮುತ್ತಲಿನ ಭಕ್ತರ ಸಂಭ್ರಮಕ್ಕೆ ಕಾರಣವಾದ ‘ಕರಾಯ’ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಸಹಸ್ರ ಕಲಶ ಸಹಿತ ಅಷ್ಟಬಂಧ ಬ್ರಹ್ಮಕಲಶೋತ್ಸವ, ನೂತನ ಧ್ವಜಸ್ತಂಭ ಪ್ರತಿಷ್ಠೆ, ನೂತನ ಬ್ರಹ್ಮರಥ ಸಮರ್ಪಣೆ, ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಬ್ರಹ್ಮರಥೋತ್ಸವ ಹಾಗೂ ನೇಮೋತ್ಸವದ ಸಂಭ್ರಮದಲ್ಲಿದೆ.
ನಾಳೆ (ಏ.13) ಸೋಮವಾರ ಬ್ರಹ್ಮರಥವು ಪುರಪ್ರವೇಶ ಮಾಡಲಿದ್ದು, ಸಂಜೆ 4-00 ಗಂಟೆಗೆ ಸರಿಯಾಗಿ ಶ್ರೀ ತನ್ನೋಜಿ ಮಹಾಲಿಂಗೇಶ್ವರ ದೇವಸ್ಥಾನ ಹಲೇಜಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕರಾಯಕ್ಕೆ ವೈಧಿಕ ವಿಧಿವಿಧಾನದೊಂದಿಗೆ ಹೊರಡಲಿರುವ ಬ್ರಹ್ಮರಥದ ಶೋಭಾಯಾತ್ರೆಗೆ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರುಗಳಾದ ಬೆಳ್ತಂಗಡಿ ಕ್ಷೇತ್ರದ ಜನಪ್ರಿಯ ಶಾಸಕ ಹರೀಶ್ ಪೂಂಜಾ ಹಾಗೂ ನಾಗಾರ್ಜುನ್ ರಾವ್ ಇವರುಗಳು ಚಾಲನೆ ನೀಡಲಿದ್ದಾರೆ.
ಇದು ಐತಿಹಾಸಿಕ ಕಾರ್ಯಕ್ರಮವಾಗಿರುವುದರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ವೀರಗಾಸೆ, ಕೇರಳ ತೈಯಮ್, ಡೊಳ್ಳು ಕುಣಿತ, ವಾಯಲಿನ್, ಚೆಂಡೆ ಮತ್ತು ಒಂದು ಸಾವಿರ ಭಜಕರನ್ನೊಳಗೊಂಡ 50 ಭಜನಾ ತಂಡ, ಕೀಲು ಕುದುರೆ ವೈವಿಧ್ಯಮಯ ಸಿಡಿಮದ್ದು ಪ್ರದರ್ಶನದೊಂದಿಗೆ, ವಿವಿಧ ಕಲಾ ಪ್ರಕಾರಗಳ ಅದ್ಧೂರಿ ಶೋಭಾಯಾತ್ರೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಭಕ್ತಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆಂದು ವರದಿಯಾಗಿದೆ.
Preparation for the entry of Brahmaratha of Karaya Sri Mahalingeshwar temple – ತುಳುಟೈಮ್ಸ್
ಇದನ್ನೂ ಓದಿ :ಏಕಾಂತ ಮತ್ತು ಒಂಟಿತನಕ್ಕಿರುವ ವ್ಯತ್ಯಾಸವೇನು?
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Rbe3FHAhoVM?si=rm7GAZT0MHlUJo7O











