ಬೆಂಗಳೂರು : Tulu Times l ಬೆಂಗಳೂರಿನಲ್ಲಿ ಕರ್ನಾಟಕ ಪೊಲೀಸ್ ಧ್ವಜ ದಿನವನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆದ ಈ ಸಮಾರಂಭದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿರುವ ಪೊಲೀಸ್ ಸಿಬ್ಬಂದಿಯನ್ನು ಗೌರವಿಸಲಾಯಿತು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 158 ಪೊಲೀಸ್ ಸಿಬ್ಬಂದಿಗೆ ಪದಕ ಪ್ರದಾನಿಸಿ, ಅವರ ಸೇವೆ ಮತ್ತು ನಿಷ್ಠೆಯನ್ನು ಮೆಚ್ಚಿದರು. ಈ ಪುರಸ್ಕೃತರಲ್ಲಿ ಐದು ಐಪಿಎಸ್ ಅಧಿಕಾರಿಗಳುಸುಮನ್ ಡಿ ಪೆನ್ನೇಕರ್, ಡಾ. ಕೆ ಅರುಣ್, ಪೃಥ್ವಿಕ್ ಶಂಕರ್, ಡಾ. ಗೋಪಾಲ್ ಎಂ ಬೈಕೋಡ್ ಮತ್ತು ಹರಿಬಾಬು ಸೇರಿದ್ದರು.
ಈ ಸಂದರ್ಭದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಪೊಲೀಸ್ ಇಲಾಖೆಯ ಶಿಸ್ತಿನ, ಪ್ರಾಮಾಣಿಕತೆಯ ಹಾಗೂ ಸಮರ್ಪಿತ ಸೇವೆಯನ್ನು ಕೊಂಡಾಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ, ಬ್ಯಾಂಕ್ ದರೋಡೆ ಹಾಗೂ ಮದ್ದು ಮಾಫಿಯಾಗಳನ್ನು ನಿಗ್ರಹಿಸುವಲ್ಲಿ ಪೊಲೀಸ್ ಇಲಾಖೆ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು. ಇಂಡಿಯಾ ಜಸ್ಟಿಸ್ ರಿಪೋರ್ಟ್ ಪ್ರಕಾರ ನ್ಯಾಯ ವಿತರಣೆಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿರುವುದಕ್ಕೂ ಪೊಲೀಸ್ ಇಲಾಖೆಯ ಸೇವೆಯೇ ಕಾರಣ ಎಂದು ಅವರು ಉಲ್ಲೇಖಿಸಿದರು.
ಸೈಬರ್ ಅಪರಾಧದ ಬಗ್ಗೆ ಸಿಎಂ ಚಿಂತನೆ ;
ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಭಾಷಣದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಹೆಚ್ಚಳದ ಬಗ್ಗೆ ಗಂಭೀರ ಚಿಂತನೆ ವ್ಯಕ್ತಪಡಿಸಿದರು. ಈ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದನ್ನು ಉಲ್ಲೇಖಿಸಿ, ತಂತ್ರಜ್ಞಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಅಪರಾಧ ಅಧಿಕಾರಿಗಳಿಗೆ ತಿಳಿಯದೇ ಇರಲು ಸಾಧ್ಯವಿಲ್ಲ ಎಂದು ಹೇಳಿದರು.
ಸಮರ್ಪಕವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಗೆ ಸೂಚನೆ ನೀಡಿದರು. ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದಾಗ ಮಾತ್ರ ಅಪರಾಧ ಪ್ರಮಾಣ ಕಡಿಮೆಯಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು. ಕರ್ನಾಟಕ ಪೊಲೀಸ್ ಧ್ವಜ ದಿನದ ಈ ಸಮಾರಂಭವು ಪೊಲೀಸ್ ಇಲಾಖೆಯ ಸೇವೆಯನ್ನು ಗುರುತಿಸುವುದರ ಜೊತೆಗೆ, ಭವಿಷ್ಯದ ಸವಾಲುಗಳಿಗೆ ಸಜ್ಜಾಗುವ ಸಂದೇಶವನ್ನೂ ನೀಡಿದೆ. ವಿಶೇಷವಾಗಿ ಸೈಬರ್ ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಹಾಗೂ ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸುವುದು ಈಗಿನ ಪ್ರಮುಖ ಆದ್ಯತೆಯಾಗಿದ್ದು, ಸುರಕ್ಷಿತ ಸಮಾಜ ನಿರ್ಮಾಣದತ್ತ ಇದು ಮಹತ್ವದ ಹೆಜ್ಜೆಯಾಗಿದೆ.
Karnataka Police ‘Flag Day’: CM honours 158 officers, calls for strict action against cybercrime – ತುಳುಟೈಮ್ಸ್
ಇದನ್ನೂ ಓದಿ :‘ಮೊದಲು ನಿನ್ನನ್ನು ನೀನು ಪ್ರೀತಿಸು’ : ಇದು ತಪ್ಪು ಕಲ್ಪನೆಯೇ?
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/2AWkk7R62HI?si=a_6y6jqN_IItKsoS











