ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಉಪ್ಪಿನಂಗಡಿ : ನಾಗಮಂಡಲೋತ್ಸವ ಕಾರ್ಯಾಲಯ ಉದ್ಘಾಟನೆ

ಉಪ್ಪಿನಂಗಡಿ : Tulu Times l ಕ್ಷೇತ್ರದಲ್ಲಿ ಮೊದಲ ಬಾರಿಗೆ ನಾಗಮಂಡಲ ಧಾರ್ಮಿಕ ಆಚರಣೆಗಳು ನಡೆಯುತ್ತಿರುವುದು ಸಂತೋಷದ ವಿಚಾರ. ಈ ಪವಿತ್ರ ಕಾರ್ಯಕ್ರಮದಿಂದ ಕ್ಷೇತ್ರದ ಸಾನಿಧ್ಯ ವೃದ್ಧಿಯಾಗುವುದರ ಜೊತೆಗೆ, ನಾಗಮಂಡಲವನ್ನು ನೋಡುವ ಭಕ್ತರ ಬಹುಕಾಲದ ಆಶೆ ನನಸಾಗುತ್ತಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅರ್ತಿಲ ಕೃಷ್ಣರಾವ್ ಹೇಳಿದರು.

ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ಚತುರ್ ಪವಿತ್ರ ನಾಗಮಂಡಲ ಉತ್ಸವದ ಕಾರ್ಯಾಲಯವನ್ನು ಇಂದು (ಮಾ.26) ರಂದು ವಿಧಿವಿಧಾನಗಳೊಂದಿಗೆ ಉದ್ಘಾಟಿಸಿ ಮಾತನಾಡಿದ ಇವರು ಎಲ್ಲಾ ಹಿಂದೂ ಬಂಧುಗಳು ಶ್ರದ್ದಾ ಭಕ್ತಿಯಿಂದ ಉತ್ಸವದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸುವಂತೆ ಮನವಿ ಮಾಡಿದರು.

ನಾಗನ ಆರಾಧನೆಗೆ ಹಿಂದೂ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದ್ದು, ಇದರ ಸೇವೆಯಿಂದ ಸುಖ, ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನಲೆಯಲ್ಲಿ ಎಲ್ಲರೂ ಶ್ರದ್ದೆಯಿಂದ ನಾಗಮಂಡಲದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ನಾಗಮಂಡಲಕ್ಕೆ ಅಗತ್ಯವಾದ ಹಿಂಗಾರ ಮತ್ತು ಸಿಯಾಳವನ್ನು ಪ್ರತೀ ಮನೆಯಿಂದ ಒದಗಿಸಿ ಸಹಕರಿಸುವಂತೆ ಕರೆ ನೀಡಿದರು.

ನಾಗಮಂಡಲ ಸಮಿತಿಯ ಅಧ್ಯಕ್ಷರಾದ ಚಂದಪ್ಪ ಮೂಲ್ಯ ಮಾತನಾಡಿ, ನಾಗನ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ದೇವರ ಕೃಪೆ. ಇಡೀ ಹಿಂದೂ ಸಮಾಜ ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಗದೇವರ ಆಶೀರ್ವಾದ ಪಡೆಯಬೇಕು ಎಂದರು. ಇದೇ ದಿನದಿಂದ ಆರಂಭವಾಗುವ ಕರೆ ಸೇವೆ ಹಾಗೂ ಚಪ್ಪರ ನಿರ್ಮಾಣ, ನಗರದ ಅಲಂಕಾರ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯ ವೆಂಕಪ್ಪ ಪೂಜಾರಿ, ಪಾಕ ತಜ್ಞ ರವಿ ಕುಂಟಿನಿ, ದೇವಳದ ವೆಂಕಟೇಶ್‌, ಗುತ್ತಿಗೆದಾರ ಆನಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ ಸ್ವಾಗತಿಸಿದರು. ಶ್ರೀರಾಮ್ ಭಟ್ ವಂದಿಸಿ, ವಿಜಿತ್‌ ನಿರೂಪಿಸಿದರು.

Uppinangady: Nagamandalotsava office inaugurated – ತುಳುಟೈಮ್ಸ್

ಇದನ್ನೂ ಓದಿ :ಬೆಂಗಳೂರು ನಗರ ಮತ್ತೊಮ್ಮೆ ಕ್ರೀಡಾಭಿಮಾನಿಗಳ ಸಂಭ್ರಮಕ್ಕೆ‌ ಸಾಕ್ಷಿಯಾಗಲು ದಿನಗಣನೆ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=RYKC1prYkH8KPFKQ

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page