ಬೆಂಗಳೂರು: Tulu Times l ತನ್ನನ್ನು ತಾನೇ ಚಿತ್ರ ನಿರ್ದೇಶಕ ಎಂದು ಹೇಳಿಕೊಂಡು ಸಿನಿಮಾ ಚಿತ್ರೀಕರಣದ ಹಾರ್ಡ್ಡಿಸ್ಕ್ಗಳನ್ನು ಕೊಂಡೊಯ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಚೆನ್ನೈ ಮೂಲದ ಮಂಗಳೇಶ್ವರನ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಎಸ್ವಿ ಪ್ರೊಡಕ್ಷನ್ ಸಂಸ್ಥೆಯ ಶಿವಶಂಕರ್ ಅವರು ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಫೆಬ್ರವರಿ 27ರಂದು ಮಂಗಳೇಶ್ವರನ್ ಅವರು ಎಸ್ವಿ ಪ್ರೊಡಕ್ಷನ್ ಕಚೇರಿಗೆ ಬಂದು ತಾನು ತಮಿಳು ಚಿತ್ರ ನಿರ್ದೇಶಕ ಎಂದು ಪರಿಚಯಿಸಿಕೊಂಡಿದ್ದಾರೆ. ಅವರು “ಅಳಗರ್ ಯಾನೈ” ಎಂಬ ತಮಿಳು ಸಿನಿಮಾದ ಕಥೆಯನ್ನು ಹೇಳಿ, ಈ ಚಿತ್ರಕ್ಕೆ ದೊಡ್ಡ ಬಜೆಟ್ ಬೇಕಾಗುತ್ತದೆ ಎಂದು ತಿಳಿಸಿದ್ದರು. ಇದನ್ನು ನಂಬಿದ ಶಿವಶಂಕರ್ ಮತ್ತು ನಟೇಶ್ ಮೂರ್ತಿ ಅವರು ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದರು. ಚಿತ್ರ ನಿರ್ಮಾಣಕ್ಕಾಗಿ ಸುಮಾರು 1.3 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಚಿತ್ರೀಕರಣ ನಡೆಯುವ ವೇಳೆ ಮಂಗಳೇಶ್ವರನ್ ಮತ್ತು ಚಿತ್ರತಂಡದ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು ಎಂದು ಹೇಳಲಾಗಿದೆ.
ಚಿತ್ರೀಕರಣದ ದೃಶ್ಯಗಳನ್ನು ಸಂಗ್ರಹಿಸಲು ಶಿವಶಂಕರ್ ಅವರು 22 ಹಾರ್ಡ್ಡಿಸ್ಕ್ಗಳನ್ನು ಖರೀದಿಸಿದ್ದರು. ಎಲ್ಲಾ ಚಿತ್ರೀಕರಣದ ದೃಶ್ಯಗಳನ್ನು ಅವುಗಳಲ್ಲಿ ಸಂಗ್ರಹಿಸಿ ನಂತರ ಮಂಗಳೇಶ್ವರನ್ ಅವರಿಗೆ ನೀಡಿದ್ದಾರೆ. ಆದರೆ ನಂತರ ಅವರು ಆ ಹಾರ್ಡ್ಡಿಸ್ಕ್ಗಳನ್ನು ಹಿಂತಿರುಗಿಸಿಲ್ಲ ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರಶ್ನಿಸಿದಾಗ, ಹಾರ್ಡ್ಡಿಸ್ಕ್ಗಳನ್ನು ಬೆಂಗಳೂರಿನ ಮತ್ತೊಬ್ಬ ವ್ಯಕ್ತಿಗೆ ನೀಡಿದ್ದೇನೆ ಎಂದು ಮಂಗಳೇಶ್ವರನ್ ತಿಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಅವರ ಬಗ್ಗೆ ವಿಚಾರಿಸಿದಾಗ, ಅವರು ನಕಲಿ ನಿರ್ದೇಶಕ ಎಂದು ತಂಡಕ್ಕೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Case registered against fake director for allegedly taking away filming hard disk – ತುಳು ಟೈಮ್ಸ್
ಇದನ್ನೂ ಓದಿ : ಮಾನವನ ನಿಜವಾದ ಅಸ್ತಿತ್ವವನ್ನು ಸೂಚಿಸುವುದೇ ‘ಆತ್ಮ’
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/-PlvbIZDxfU?si=16u4zDqFh1_lBN_I










