Jujitsu ಆಟಗಾರ್ತಿಯೊಬ್ಬರು ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿದ್ದ ಜುಜುಟ್ಸು ಆಟಗಾರ್ತಿ ರೋಹಿಣಿ ಕಲಾಂ ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ಅಷ್ಟಲ್ಲದೆ ಕ್ರೀಡಾಲೋಕಕ್ಕೆ ಆಘಾತವನ್ನುಂಟು ಮಾಡಿದೆ.
ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಅರ್ಜುನ್ ನಗರದ ರಾಧಾಗಂಜ್‌ನಲ್ಲಿರುವ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 32 ವರ್ಷದ ರೋಹಿಣಿ ಕಲಾಂ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಜೀವಾಂತ್ಯ ಮಾಡಿಕೊಂಡಿದ್ದಾರೆ.
ರೋಹಿಣಿ ಕಲಾಂ ಜುಜುಟ್ಸು ಸಮರ ಕಲೆಗಳಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದರು. ರೋಹಿಣಿ ಅವರ ಆತ್ಮಹತ್ಯೆಗೆ ನಿಖರ ಕಾರಣ ಬಹಿರಂಗಗೊಂಡಿಲ್ಲ. ಕುಟುಂಬ ಮತ್ತು ಪರಿಚಯಸ್ಥರ ಪ್ರಕಾರ, ಅವರು ಕಳೆದ ಕೆಲವು ದಿನಗಳಿಂದ ಒತ್ತಡದಲ್ಲಿದ್ದರು. ರೋಹಿಣಿ ಖಾಸಗಿ ಶಾಲೆಯಲ್ಲಿ ಸಮರಕಲೆಗಳ ಬಗ್ಗೆ ತರಬೇತಿ ನೀಡುತ್ತಿದ್ದರು. ಕಳೆದ ಐದು ತಿಂಗಳ ಹಿಂದಷ್ಟೇ ಉದರದ ಅನಾರೋಗ್ಯ (ಹೊಟ್ಟೆಯಲ್ಲಿ ಗಡ್ಡೆ) ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಮದುವೆ ಪ್ರಸ್ತಾಪಗಳನ್ನು ನಿರಾಕರಿಸುತ್ತಿದ್ದರು ಎಂದು ಆಕೆಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಅಂತೆಯೇ ಶಾಲೆಯ ಪ್ರಾಂಶುಪಾಲರು ಆಕೆಗೆ ತೊಂದರೆ ನೀಡುತ್ತಿದ್ದರು. ಇದರಿಂದ ಆಕೆಗೆ ಮಾನಸಿಕ ಒತ್ತಡ ಉಂಟಾಗಿತ್ತು ಎಂದು ಪೋಷಕರು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರೋಹಿಣಿ 2007 ರಲ್ಲಿ ತಮ್ಮ ಕ್ರೀಡಾ ವೃತ್ತಿಜೀವನವನ್ನು ಪ್ರಾರಂಭಿಸಿದರು. 2015 ರಲ್ಲಿ ವೃತ್ತಿಪರವಾಗಿ ಜುಜಿಟ್ಸುನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದ್ರು.
ರೋಹಿಣಿ ಹ್ಯಾಂಗ್ಝೌನಲ್ಲಿ ನಡೆದ 19 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ವಿಶ್ವ ಕ್ರೀಡಾಕೂಟಕ್ಕೆ ಆಯ್ಕೆಯಾದ ಏಕೈಕ ಭಾರತೀಯ ಕ್ರೀಡಾಪಟುವಾಗಿದ್ದರು.
2022 ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಥೈಲ್ಯಾಂಡ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ 48 ಕೆಜಿ ವಿಭಾಗದಲ್ಲಿ ಕಂಚು ಮತ್ತು ಅಬುಧಾಬಿಯಲ್ಲಿ ನಡೆದ 8 ನೇ ಏಷ್ಯನ್ ಜುಜಿಟ್ಸು ಚಾಂಪಿಯನ್‌ಶಿಪ್ 2024 ರಲ್ಲಿ ಡ್ಯುಯೊ ಕ್ಲಾಸಿಕ್ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದರು. ಇಷ್ಟಲ್ಲದೆ ಹಲವು ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಬಾಚಿಕೊಂಡಿದ್ದರು.
ಐಪಿಎಸ್ ಆಗಬೇಕೆಂದು ಕನಸು ಕಂಡಿದ್ದ ರೋಹಿಣಿ ಅವರ ಆತ್ಮಹತ್ಯೆ ಕುಟುಂಬವನ್ನು ಕಣ್ಣೀರ ಕೋಡಿಯಲ್ಲಿ ಮುಳುಗಿಸಿದೆ.
ಇದನ್ನೂ ಓದಿ: Heavy rain:ಈ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆ ಗುಡುಗು ಸಹಿತ ಮಳೆ!
=============
ವೀಡಿಯೋ ಸುದ್ದಿಗಳಿಗಾಗಿ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











