ಕರ್ನಾಟಕ : Tulu Times l ರಾಜ್ಯದ ಆರ್ಥಿಕತೆ ಬಲಿಷ್ಠವಾಗಿ ವಿಸ್ತರಿಸುತ್ತಿದ್ದು, 2025–26ನೇ ಸಾಲಿನಲ್ಲಿ ರಾಜ್ಯದ ಒಟ್ಟು ಒಳನಾಡು ಉತ್ಪನ್ನ (GSDP) ₹17.2 ಲಕ್ಷ ಕೋಟಿಗೂ ಅಧಿಕವಾಗುವ ನಿರೀಕ್ಷೆಯಿದೆ. ರಾಜ್ಯ ಆರ್ಥಿಕ ಸಮೀಕ್ಷೆಯ ಪ್ರಕಾರ ಕರ್ನಾಟಕದ ಆರ್ಥಿಕ ಬೆಳವಣಿಗೆ ದರವು ಸುಮಾರು 8.1 ಶೇಕಡಾ ಇರಲಿದೆ ಎಂದು ಅಂದಾಜಿಸಲಾಗಿದೆ. ಇದು ದೇಶದ ಸರಾಸರಿ ಬೆಳವಣಿಗೆ ದರಕ್ಕಿಂತ ಹೆಚ್ಚು ಎಂದು ವರದಿ ತಿಳಿಸಿದೆ.
ಉತ್ಪಾದನಾ ಕ್ಷೇತ್ರದ ಸ್ಪರ್ಧಾತ್ಮಕತೆ ಹೆಚ್ಚಳ ;
ಆರ್ಥಿಕ ಸಮೀಕ್ಷೆಯ ಪ್ರಕಾರ ಕರ್ನಾಟಕದ ಉತ್ಪಾದನಾ ವ್ಯವಸ್ಥೆ ಹೆಚ್ಚು ಸ್ಪರ್ಧಾತ್ಮಕವಾಗುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯತೆ ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆಗಳೊಂದಿಗೆ ರಾಜ್ಯದ ಸಂಪರ್ಕವೂ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ರಾಜ್ಯದ ರಫ್ತು ಹಾಗೂ ಕೈಗಾರಿಕಾ ಚಟುವಟಿಕೆಗಳು ಉತ್ತಮವಾಗಿ ವೃದ್ಧಿಯಾಗುತ್ತಿವೆ.
ಸರ್ಕಾರದ ಆದಾಯದಲ್ಲೂ ಏರಿಕೆ ;
ರಾಜ್ಯದ ಒಟ್ಟು ಆದಾಯವೂ ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿದೆ. ಒಟ್ಟು ಸರ್ಕಾರದ ಆದಾಯವು ₹3.5 ಲಕ್ಷ ಕೋಟಿಯಿಂದ ₹4 ಲಕ್ಷ ಕೋಟಿಗೂ ಹೆಚ್ಚು ಆಗುವ ಸಾಧ್ಯತೆ. ಆದಾಯ ಸ್ವೀಕೃತಿಗಳು (Revenue Receipts) ₹2.5 ಲಕ್ಷ ಕೋಟಿಯಿಂದ ₹2.9 ಲಕ್ಷ ಕೋಟಿಗೆ ಏರಿಕೆ.
ಮೂಲಧನ ಸ್ವೀಕೃತಿಗಳು (Capital Receipts) ₹1 ಲಕ್ಷ ಕೋಟಿಯಿಂದ ಸುಮಾರು ₹1.2 ಲಕ್ಷ ಕೋಟಿಗೆ ಏರಿಕೆ ಕಾಣುವ ಸಾಧ್ಯತೆ. ಆದರೆ ಅಂತಿಮ ಅಂಕಿಅಂಶಗಳು ಹಣಕಾಸು ವರ್ಷವು ಮಾರ್ಚ್ 31 ರಂದು ಮುಕ್ತಾಯವಾದ ಬಳಿಕವೇ ಸ್ಪಷ್ಟವಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
2024–25ರ ಅಂಕಿಅಂಶಗಳ ಪ್ರಕಾರ ಕೇವಲ ಒಂದು ಜಿಲ್ಲೆಯಲ್ಲಿ ಮಾತ್ರ ತಲಾ ಆದಾಯ ₹1.5 ಲಕ್ಷಕ್ಕಿಂತ ಕಡಿಮೆ ದಾಖಲಾಗಿತ್ತು. ಆ ಜಿಲ್ಲೆ ಎಂದರೆ ಕಲ್ಬುರ್ಗಿ. ಇಲ್ಲಿ ತಲಾ ಆದಾಯ ಸುಮಾರು ₹1.4 ಲಕ್ಷವಾಗಿತ್ತು. ಆದರೆ ಪ್ರಸ್ತುತ ಹಣಕಾಸು ವರ್ಷದಲ್ಲಿ ಅದು ₹1.5 ಲಕ್ಷದ ಗಡಿ ದಾಟಿರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ರಾಜ್ಯ ಸರ್ಕಾರವು 2030ರೊಳಗೆ ಸಾಧಿಸಬೇಕಾದ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ರಾಜ್ಯದ ವಿವಿಧ ಆರ್ಥಿಕ ಕ್ಷೇತ್ರಗಳನ್ನು ಹೊಂದಾಣಿಕೆ ಮಾಡುತ್ತಿದೆ. ಇದಕ್ಕಾಗಿ ಖಾಸಗಿ ವಲಯದ ಸಹಭಾಗಿತ್ವಕ್ಕೂ ಉತ್ತೇಜನ ನೀಡಲಾಗುತ್ತಿದೆ. ಪರಿಸರ, ಸಾಮಾಜಿಕ ಮತ್ತು ಆಡಳಿತ ಚೌಕಟ್ಟಿನ ಮೂಲಕ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉತ್ತೇಜಿಸುವತ್ತ ಸರ್ಕಾರ ಗಮನ ಹರಿಸಿದೆ. ಒಟ್ಟಾರೆ ಕೃಷಿ, ಕೈಗಾರಿಕೆ, ಸೇವಾ ವಲಯ, ರಫ್ತು ಹಾಗೂ ತಲಾ ಆದಾಯದ ಏರಿಕೆಯೊಂದಿಗೆ ಕರ್ನಾಟಕದ ಆರ್ಥಿಕತೆ ಸ್ಥಿರವಾಗಿ ಬೆಳೆಯುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಸೂಚಿಸಿದೆ.
Karnataka economy growing strongly: GSDP expected to cross Rs 17.2 lakh crore – ತುಳುಟೈಮ್ಸ್
ಇದನ್ನೂ ಓದಿ : ಬೆಂಗಳೂರು: ಅಕ್ರಮ ವಿದೇಶಿ ನಾಗರಿಕರ ವಿರುದ್ಧ ಭಾರೀ ದಾಳಿ : 200ಕ್ಕೂ ಹೆಚ್ಚು ಜನ ಪತ್ತೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/PtIikrbFeko?si=0LrIRqoBeotUn9QJ










