ಮುಂಬೈ: Tulu Times l ಟಿ 20 ವಿಶ್ವಕಪ್ – 2026 ರ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ರೋಚಕವಾಗಿ 7 ರನ್‌ಗಳ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಮುಂಬೈನ ವಾಂಖಡೆ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ ಭಾರೀ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್, ಕೊನೆಗೂ 246/7 ರನ್‌ಗಳಿಗೆ ಸೀಮಿತವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 253 ರನ್‌ಗಳ ದೊಡ್ಡ ಮೊತ್ತ ದಾಖಲಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ 42 ಚೆಂಡುಗಳಲ್ಲಿ 7 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 89 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಅವರಿಗೆ ಬೆಂಬಲವಾಗಿ ಶಿವಂ ದುಬೆ 43 ರನ್, ಇಶಾನ್ ಕಿಶನ್ 39 ರನ್, ಹಾರ್ದಿಕ್ ಪಾಂಡ್ಯ 27 ರನ್ ಹಾಗೂ ತಿಲಕ್ ವರ್ಮಾ 21 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು. ಭಾರತ ನೀಡಿದ 254 ರನ್‌ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡದ ಪರವಾಗಿ ಜಾಕೊಬ್ ಬೆತೆಲ್ ಅದ್ಭುತ ಶತಕ ಬಾರಿಸಿದರು. ಅವರು ಕೇವಲ 48 ಚೆಂಡುಗಳಲ್ಲಿ 105 ರನ್ ಗಳಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಲುಪಿಸಿದರೂ, ಕೊನೆಯಲ್ಲಿ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ.
ಭಾರತದ ಪರವಾಗಿ ಜಸ್ಪ್ರಿತ್ ಬುಮ್ರಾ 1/33 ಸಾಧನೆ ಮಾಡಿ ನಿಯಂತ್ರಿತ ಬೌಲಿಂಗ್ ಪ್ರದರ್ಶಿಸಿದರು. ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದು ತಂಡಕ್ಕೆ ಮಹತ್ವದ ಯಶಸ್ಸು ತಂದುಕೊಟ್ಟರು. ಇನ್ನು ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು. ಇಂಗ್ಲೆಂಡ್ ಪರವಾಗಿ ವಿಲ್ ಜ್ಯಾಕ್ಸ್ ಮತ್ತು ಅದಿಲ್ ರಶೀದ್ ತಲಾ ಎರಡು ವಿಕೆಟ್ ಪಡೆದರು. ಈ ಜಯದೊಂದಿಗೆ ಭಾರತ ಫೈನಲ್‌ಗೆ ಪ್ರವೇಶಿಸಿದ್ದು, ಮಾರ್ಚ್ 8ರಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಈ ಮೂಲಕ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಭಾರತದ ಕನಸು ಇನ್ನಷ್ಟು ಬಲವಾಗಿದೆ.
T20 World Cup: India enter final with thrilling win over England – ತುಳುಟೈಮ್ಸ್
ಇದನ್ನೂ ಓದಿ : ಮುಂದಿನ ಶೈಕ್ಷಣಿಕ ವರ್ಷದಿಂದ ಖಾಸಗಿ ಶಾಲೆಗಳ ಶುಲ್ಕ 8–12% ಹೆಚ್ಚಾಗುವ ಸಾಧ್ಯತೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/PtIikrbFeko?si=1zFWr-cSIh5yWSO2











