ಎಐ : Tulu Times l ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಜೊತೆ ಕೃತಕ ಬುದ್ಧಿಮತ್ತೆ (AI) ಒಪ್ಪಂದಕ್ಕೆ ಸಹಿ ಹಾಕಿದ ನಂತರ OpenAI ನಿರ್ಮಿತ ಚಾಟ್‌ಬಾಟ್ ಸೇವೆ ChatGPT ವಿರುದ್ಧ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆ 25 ಲಕ್ಷಕ್ಕೂ ಹೆಚ್ಚು ಬಳಕೆದಾರರು ಚಾಟ್‌ಜಿಪಿಟಿ ಸೇವೆಯನ್ನು ಬಹಿಷ್ಕರಿಸುವುದಾಗಿ ಪ್ರತಿಜ್ಞೆ ಮಾಡಿದರೆಂದು ವರದಿಯಾಗಿದೆ.
ಕಳೆದ ವಾರ OpenAI ಪೆಂಟಗನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರಡಿ ಅಮೆರಿಕದ ರಕ್ಷಣಾ ಇಲಾಖೆ ತನ್ನ ವರ್ಗೀಕೃತ (classified) ನೆಟ್‌ವರ್ಕ್‌ನಲ್ಲಿ ಚಾಟ್‌ಜಿಪಿಟಿ AI ಮಾದರಿಯನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಪಡೆದಿದೆ.
ಈ ಬೆಳವಣಿಗೆ ನಂತರ ಕೆಲ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿ, “ಸೈನಿಕ ಮತ್ತು ಭದ್ರತಾ ಕಾರ್ಯಗಳಲ್ಲಿ AI ಬಳಕೆ ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧ” ಎಂದು ಆಕ್ಷೇಪಿಸಿದ್ದಾರೆ.
900 ಮಿಲಿಯನ್ ಬಳಕೆದಾರರ ಪೈಕಿ 2.5 ಮಿಲಿಯನ್ ಹೊರಕ್ಕೆ ;
ಚಾಟ್‌ಜಿಪಿಟಿಗೆ ವಿಶ್ವದಾದ್ಯಂತ 900 ಮಿಲಿಯನ್‌ಗಿಂತ ಹೆಚ್ಚು ಬಳಕೆದಾರರಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಬಹಿಷ್ಕಾರ ಅಭಿಯಾನ ನಡೆಸುತ್ತಿರುವ ವೆಬ್‌ಸೈಟ್ ಪ್ರಕಾರ, 25 ಲಕ್ಷಕ್ಕೂ ಹೆಚ್ಚು ಮಂದಿ ಈಗಾಗಲೇ ಸೇವೆಯಿಂದ ಹೊರಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಹಂಚಿಕೆ, ಸಹಿ ಅಭಿಯಾನ ಹಾಗೂ ಆ್ಯಪ್ ಬಳಕೆ ಅಂಕಿಅಂಶಗಳ ಆಧಾರದ ಮೇಲೆ ಈ ಅಂದಾಜು ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಆ್ಯಪ್ ವಿಶ್ಲೇಷಕ ಸಂಸ್ಥೆಗಳ ಪ್ರಕಾರ, ಪೆಂಟಗನ್ ಒಪ್ಪಂದ ಘೋಷಣೆಯ ನಂತರ ಅಮೆರಿಕಾದಲ್ಲಿ ಚಾಟ್‌ಜಿಪಿಟಿ ಮೊಬೈಲ್ ಆಪ್ ಅನ್‌ಇನ್‌ಸ್ಟಾಲ್ ಪ್ರಮಾಣವು ಒಂದು ದಿನದಲ್ಲೇ 295% ಏರಿಕೆಯಾಗಿದೆ ಎಂದು ವರದಿಯಾಗಿದೆ. ಇದೇ ವೇಳೆ, ಪ್ರತಿಸ್ಪರ್ಧಿ AI ಚಾಟ್‌ಬಾಟ್ ಸೇವೆ Anthropic ನಿರ್ಮಿತ ‘Claude’ ಆ್ಯಪ್ ಆಪಲ್ ಆಪ್‌ಸ್ಟೋರ್‌ನಲ್ಲಿ ಅಗ್ರ ಸ್ಥಾನಕ್ಕೇರಿದೆ ಎಂದು ತಿಳಿದುಬಂದಿದೆ.
AI ತಂತ್ರಜ್ಞಾನವು ರಕ್ಷಣಾ ಕ್ಷೇತ್ರದಲ್ಲಿ ಬಳಕೆಯಾಗಬೇಕೇ ಎಂಬ ಚರ್ಚೆ ಈಗ ಜಾಗತಿಕ ಮಟ್ಟದಲ್ಲಿ ಚುರುಕುಗೊಂಡಿದೆ. ಬಳಕೆದಾರರ ನಂಬಿಕೆ ಉಳಿಸಿಕೊಳ್ಳುವುದು AI ಕಂಪನಿಗಳ ಮುಂದೆ ದೊಡ್ಡ ಸವಾಲಾಗಿದ್ದು, ಮುಂದಿನ ದಿನಗಳಲ್ಲಿ OpenAI ಯಾವ ರೀತಿಯ ಸ್ಪಷ್ಟನೆ ನೀಡುತ್ತದೆ ಎಂಬುದರ ಮೇಲೆ ಬೆಳವಣಿಗೆಗಳು ಅವಲಂಬಿತವಾಗಿವೆ.
ChatGPT boycotted in wake of Pentagon deal – ತುಳುಟೈಮ್ಸ್
ಇದನ್ನೂ ಓದಿ : ತಡರಾತ್ರಿ ಸ್ನ್ಯಾಕಿಂಗ್ ತಪ್ಪಿಸಲು ಇಲ್ಲಿದೆ ಬೆಸ್ಟ್ ಪ್ಲಾನ್ !
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/KpxF-TdEQqM?si=fBvXK6BQTnU50WyV











