ಬೆಂಗಳೂರು : Tulu Times l ಬೆಂಗಳೂರು ನಗರದ ವಾಯು ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುರ್ತು ಕ್ರಮಕ್ಕೆ ಮುಂದಾಗಿದೆ. ವಾಯು ಮಾಲಿನ್ಯ ನಿಯಂತ್ರಣದ ಕುರಿತು ಸಮಗ್ರ ಕಾರ್ಯಯೋಜನೆ ರೂಪಿಸಲು ನಗರ ಶಾಸಕರ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು ಎಂದು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ನಗರದ ವಾಯು ಗುಣಮಟ್ಟ ದಿನೇ ದಿನೇ ಕುಸಿಯುತ್ತಿರುವುದರಿಂದ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬೆಂಗಳೂರು ಕೂಡ ದೆಹಲಿ ನಗರದಂತೆಯೇ ವಾಯಮಾಲಿನ್ಯದ ತೀರಾ ವಿಪರೀತ ಪರಿಸ್ಥಿತಿಗೆ ತಲುಪುವ ಅಪಾಯವಿದೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಈ ಸಭೆಯನ್ನು ನಡೆಸುವಂತೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಮನವಿ ಮಾಡಿದ್ದರು. ಧೂಳು ಮತ್ತು ಮಾಲಿನ್ಯದ ಪರಿಣಾಮವಾಗಿ ಮಕ್ಕಳಲ್ಲಿ ಉಸಿರಾಟ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ ಎಂದು ಅವರು ಗಮನಕ್ಕೆ ತಂದಿದ್ದರು. ಕೆಲವು ವೈದ್ಯರು ಕುಟುಂಬಗಳಿಗೆ ನಗರ ಹೊರವಲಯಕ್ಕೆ ಸ್ಥಳಾಂತರವಾಗುವಂತೆ ಸಲಹೆ ನೀಡುತ್ತಿರುವುದೂ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ನಗರದಲ್ಲಿ 11 ಸ್ಥಿರ ಕೇಂದ್ರಗಳು ಮತ್ತು 13 ಮೊಬೈಲ್ ಘಟಕಗಳ ಮೂಲಕ ವಾಯು ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕ (AQI) 100 ಮೀರಿದಾಗ ತಕ್ಷಣ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿಗದಿತ ಅವಧಿಯಲ್ಲಿ ತಿದ್ದುಪಡಿ ಕ್ರಮ ಕೈಗೊಳ್ಳದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಹಿರಿಯ ಅಧಿಕಾರಿಗಳು ಮತ್ತು ಎಲ್ಲಾ ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಾಯು, ಜಲ ಹಾಗೂ ಧ್ವನಿ ಮಾಲಿನ್ಯ ನಿಯಂತ್ರಣ ಕುರಿತು ಸಮನ್ವಯಾತ್ಮಕ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ.
Air pollution crisis: Government calls emergency meeting of MLAs – ತುಳುಟೈಮ್ಸ್
ಇದನ್ನೂ ಓದಿ :ಅಫ್ಘಾನಿಸ್ತಾನದಿಂದ ಪಾಕಿಸ್ತಾನದ ಮೇಲೆ ದಾಳಿ : ಗಡಿ ಪ್ರದೇಶದಲ್ಲಿ ಭಾರೀ ಘರ್ಷಣೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/KlcZ9m1ZJ5U?si=SpClitLO33asPk7u











