ಕಡಬ : Tulu Times l ಕಡಬ ತಾಲೂಕಿನ ಸುಬ್ರಹ್ಮಣ್ಯ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಅಧಿಕಾರಿಗಳಿಂದ ಯುವಕನ ಮೇಲೆ ಹಲ್ಲೆ ನಡೆದಿರುವ ಆರೋಪ ಹೊರಬಂದಿದ್ದು, ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಗಾಯಗೊಂಡ ಯುವಕನನ್ನು ಜೀವನ್ (27) ಎಂದು ಗುರುತಿಸಲಾಗಿದೆ. ಅವರು ಐತೂರು ಗ್ರಾಮದ ಕೊಂಡೆ ಮನೆ ನಿವಾಸಿಯಾಗಿದ್ದಾರೆ. ಐತೂರು ಅರಣ್ಯ ಪ್ರದೇಶದಲ್ಲಿ ಕಾಡು ಎಮ್ಮೆ ಬೇಟೆ ಪ್ರಕರಣಕ್ಕೆ ಸಂಬಂಧಿಸಿ ಜೀವನ್ ಮತ್ತು ಜೈನ್ ವರ್ಕಿ (50) ವಿರುದ್ಧ ಪ್ರಕರಣ ದಾಖಲಾಗಿತ್ತು. ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಹೇಳಿಕೆ ದಾಖಲಿಸಲು ಸುಬ್ರಹ್ಮಣ್ಯ ಅರಣ್ಯ ಕಚೇರಿಗೆ ಹಾಜರಾಗಿದ್ದರು.
ಆ ವೇಳೆ ಅಧಿಕಾರಿಗಳು ಜೈನ್ ವರ್ಕಿಯನ್ನು ಹೊರಗೆ ಕಳುಹಿಸಿ, ಒಳಗೆ ಜೀವನ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ ಗಾಯಗೊಂಡ ಜೀವನ್ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ.
ಘಟನೆಯ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಆಸ್ಪತ್ರೆ ಮುಂದೆ ಸೇರಿ ಪ್ರತಿಭಟನೆ ನಡೆಸಿದರು. ಸುಬ್ರಹ್ಮಣ್ಯ ರೇಂಜ್ ಫಾರೆಸ್ಟ್ ಅಧಿಕಾರಿ ವಿಮಲ್ ಬಾಬು ಹಾಗೂ ಸಿಬ್ಬಂದಿಗಳಾದ ಪ್ರಕಾಶ್ ಮತ್ತು ಆದರ್ಶ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಗಂಭೀರ ಗಾಯಗೊಂಡ ಜೀವನ್ ಅವರನ್ನು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತು ನ್ಯಾಯಸಮ್ಮತ ತನಿಖೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಘಟನೆ ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದ್ದು, ಮುಂದಿನ ಕ್ರಮಗಳತ್ತ ಎಲ್ಲರ ಗಮನ ನೆಟ್ಟಿದೆ.
Kadaba: Youth attacked at Subrahmanya Range Forest Office – ತುಳುಟೈಮ್ಸ್
ಇದನ್ನೂ ಓದಿ :ಕಡಬ: ಸುಬ್ರಹ್ಮಣ್ಯ ರೇಂಜ್ ಅರಣ್ಯ ಕಚೇರಿಯಲ್ಲಿ ಯುವಕನ ಮೇಲೆ ಹಲ್ಲೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/KlcZ9m1ZJ5U?si=YWjr84-RUBOdFWy2










