Bantwal: ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿಯ ಅವಘಡ ಸಂಭವಿಸಿದ್ದು ಯುವಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿ ಮನೆಮಂದಿ ಸುರಕ್ಷಿತವಾಗಿ ಪಾರಾದ ಘಟನೆ ನಡೆದಿದೆ. ಅನಂತಾಡಿ ಗ್ರಾಮದ ಬಾಬನಕಟ್ಟೆ ಸಮೀಪದ ಹಿರ್ತಂದ ಬೈಲಿನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.
ಅ. 22ರ ಬುಧವಾರ ರಾತ್ರಿ 9:45 ಸುಮಾರಿಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡಿತ್ತು. ಈ ವೇಳೆ ಮನೆಯಲ್ಲಿಯೇ ಇದ್ದ ಜಯರಾಜ್ ಸಿಲಿಂಡರ್ ಅನ್ನು ಮನೆ ಹೊರಕ್ಕೆ ತಂದು ಆಗಬಹುದಾದ ಭಾರೀ ದುರಂತವನ್ನು ತಪ್ಪಿಸಿದ್ದಾರೆ. ಈ ವೇಳೆ ಯುವಕನಿಗೂ ಸುಟ್ಟ ಗಾಯವಾಗಿದೆ. ಮನೆಯಲ್ಲಿದ್ದ ದ್ವಿಚಕ್ರ ವಾಹನ ಸೇರಿದಂತೆ ಕಿಟಕಿ, ಬಾಗಿಲು, ವಿದ್ಯುತ್ ಉಪಕರಣಗಳು ಮತ್ತು ಇತರ ಸಾಮಗ್ರಿಗಳಿಗೆ ಹಾನಿ ಉಂಟಾಗಿದೆ.
ಜಯರಾಜ್ ಮತ್ತು ಅವರ ತಾಯಿ ಸುಶೀಲಾ ವಾಸವಾಗಿರುವ ಮನೆಯಲ್ಲಿ, ಗ್ಯಾಸ್ ಸಿಲಿಂಡರ್ ಖಾಲಿಯಾದ ಹಿನ್ನೆಲೆ ಹೊಸ ಸಿಲಿಂಡರ್ ಅಳವಡಿಸಲಾಗಿತ್ತು. ಆದರೆ, ರೆಗ್ಯುಲೇಟರ್‌ನಲ್ಲಿ ವಾಶರ್ ಇರದ ಕಾರಣ ಗ್ಯಾಸ್ ಸೋರಿಕೆಯಾಗಿದೆ. ಒಮ್ಮೆಲೇ ಬೆಂಕಿ ಹೊತ್ತಿಕೊಂಡಿದ್ದು, ಅಡುಗೆ ಕೋಣೆ ತುಂಬ ಬೆಂಕಿಯ ಜ್ವಾಲೆ ಆವರಿಸಿದೆ.
ಈ ವೇಳೆ ಧೃತಿಗೆಡದೆ ಜಯರಾಜ್, ಬೆಂಕಿಯ ನಡುವೆಯೂ ಸಿಲಿಂಡರ್ ಅನ್ನು ಮನೆಯಿಂದ ಹೊರತಂದಿಟ್ಟಿದ್ದಾರೆ. ಈ ವೇಳೆ ನೆರೆಮನೆಯ ವೆಂಕಪ್ಪ ಪೂಜಾರಿ, ಒದ್ದೆ ಗೋಣಿಚೀಲದಿಂದ ಬೆಂಕಿಯನ್ನು ನಂದಿಸಿದ್ದಾರೆ. ಜಯರಾಜ್‌ನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್‌ನಿಂದ ಗ್ಯಾಸ್ ಸೋರಿಕೆಯೇ ಈ ಅವಘಡಕ್ಕೆ ಮೂಲ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ, ಮಾಜಿ ಅಧ್ಯಕ್ಷ ಗಣೇಶ್, ಗಣೇಶ್ ಬಂಟ್ರಿಂಜ, ಸನತ್ ಕುಮಾರ್ ರೈ, ಉಮೇಶ್ ನೆಡ್ಯಾರ ಮತ್ತು ಗ್ರಾಮ ಕರಣಿಕರು ಭೇಟಿ ನೀಡಿದ್ದಾರೆ. ಬಂಟ್ವಾಳದ ಕಾರಿಂಜೇಶ್ವರ ಗ್ಯಾಸ್ ಏಜೆನ್ಸಿಯ ಕರುಣಾಕರ ಶೆಟ್ಟಿ ಘಟನೆಗೆ ಕಾರಣವಾದ ತಾಂತ್ರಿಕ ದೋಷಕ್ಕೆ ಪರಿಹಾರ ಕ್ರಮದ ಭರವಸೆ ನೀಡಿದ್ದಾರೆ.
ಜಯರಾಜ್ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಇದನ್ನೂ ಓದಿ: Sullia: ಹಿರಿಯ ಯಕ್ಷಗಾನ ಕಲಾವಿದ ಸುಜನಾ ಸುಳ್ಯ ಇನ್ನಿಲ್ಲ
================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ: https://www.youtube.com/@tulutimess











