ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬೇಸಿಗೆಯಲ್ಲಿ ಕೃತಕ ಕಲ್ಲಂಗಡಿಗಳ ಬಗ್ಗೆ ಎಚ್ಚರ : ಆರೋಗ್ಯ ಇಲಾಖೆ

ಆರೋಗ್ಯ : Tulu Times l ಬೇಸಿಗೆ ಆರಂಭವಾಗುತ್ತಿದ್ದಂತೆ ತಾಪಮಾನ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಕೃತಕ ಬಣ್ಣ ಬಳಸಿ ಮಾರಾಟವಾಗುತ್ತಿರುವ ಕಲ್ಲಂಗಡಿ, ಹಣ್ಣಿನ ರಸಗಳು ಮತ್ತು ಐಸ್‌ಕ್ರೀಮ್‌ಗಳ ಬಗ್ಗೆ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

ಬೇಸಿಗೆಯಲ್ಲಿ ತಂಪು ನೀಡುವ ಆಹಾರ ಮತ್ತು ಪಾನೀಯಗಳ ಬೇಡಿಕೆ ಹೆಚ್ಚಾಗುವುದರಿಂದ ಕಲ್ಲಂಗಡಿ, ತಾಜಾ ಜ್ಯೂಸ್ ಹಾಗೂ ಐಸ್‌ಕ್ರೀಮ್ ಬಳಕೆ ಹೆಚ್ಚುತ್ತದೆ. ಆದರೆ ಗ್ರಾಹಕರನ್ನು ಆಕರ್ಷಿಸಲು ಕೆಲ ವ್ಯಾಪಾರಿಗಳು ಕೃತಕ ಬಣ್ಣಗಳು ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಬಳಸುತ್ತಿರುವುದು ಆರೋಗ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಎರಿತ್ರೋಸಿನ್ ಮತ್ತು ನೈಟ್ರೇಟ್‌ಗಳಂತಹ ರಾಸಾಯನಿಕಗಳನ್ನು ಕಲ್ಲಂಗಡಿಗೆ ಇಂಜೆಕ್ಷನ್ ಮೂಲಕ ಹಾಕಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಇದರಿಂದ ಜೀರ್ಣಕ್ರಿಯೆ ಸೇರಿದಂತೆ ದೇಹದ ಆರೋಗ್ಯಕ್ಕೆ ಗಂಭೀರ ಹಾನಿ ಉಂಟಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ರಾಜ್ಯಾದ್ಯಂತ ವಿಶೇಷ ಆಹಾರ ಸುರಕ್ಷತಾ ದಾಳಿ ನಡೆಸಲು ಆರೋಗ್ಯ ಇಲಾಖೆ ಯೋಜಿಸಿದೆ. ಕಲ್ಲಂಗಡಿ, ಜ್ಯೂಸ್ ಮತ್ತು ಐಸ್‌ಕ್ರೀಮ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ. ಆಹಾರ ಸುರಕ್ಷತಾ ಮತ್ತು ಮಾನದಂಡ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿಗಾವಹಿಸಲು ಸೂಚನೆ ನೀಡಲಾಗಿದೆ.

ಗ್ರಾಹಕರು ಕಲ್ಲಂಗಡಿ ಖರೀದಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತಿಯಾಗಿ ಕೆಂಪಾಗಿರುವ ಕಲ್ಲಂಗಡಿ ಕಂಡುಬಂದರೆ ಅದು ಕೃತಕ ಬಣ್ಣ ಬಳಕೆಯ ಸೂಚನೆಯಾಗಿರಬಹುದು. ಇದನ್ನು ಮನೆಯಲ್ಲೇ ಪರೀಕ್ಷಿಸಲು, ಕಲ್ಲಂಗಡಿಯನ್ನು ಕತ್ತರಿಸಿ ಕೆಂಪು ಭಾಗವನ್ನು ಟಿಷ್ಯೂ ಅಥವಾ ಹತ್ತಿ ಕಾಗದಕ್ಕೆ ಒರೆಸಿದಾಗ ಅದು ಕೆಂಪಾಗಿದೆಯಾದರೆ ರಾಸಾಯನಿಕ ಬಳಕೆ ಇರುವ ಸಾಧ್ಯತೆ ಇದೆ. ಬೇಸಿಗೆ ಇನ್ನಷ್ಟೇ ಆರಂಭವಾಗಿರುವುದರಿಂದ ಸಾರ್ವಜನಿಕರು ಜಾಗೃತರಾಗಿದ್ದು ಸುರಕ್ಷಿತ ಆಹಾರವನ್ನು ಆಯ್ಕೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಜಾಗ್ರತೆ ಮತ್ತು ಅರಿವು ಅತ್ಯಂತ ಮುಖ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ.

Health Department warns against artificial watermelons in summer – ತುಳುಟೈಮ್ಸ್

ಇದನ್ನೂ ಓದಿ : ಕವಿ ಕಾವ್ಯ ಕನ್ನಡ ಸಮಾಜ ಸೇವಾರತ್ನ 2026ರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/NSI9u3PePmw?si=a_TAPwNdtcCnaAW2

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page