ಕರ್ನಾಟಕ : Tulu Times l ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರ ಸಂಖ್ಯೆಯನ್ನು ಕಡಿಮೆ ಮಾಡುವ ಆರೋಗ್ಯ ಇಲಾಖೆಯ ಆದೇಶದ ವಿರುದ್ಧ ಆಶಾ ಕಾರ್ಯಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿ 27ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಸ್ಥೆಯಿಂದ ಎಚ್ಚರಿಕೆ ನೀಡಲಾಗಿದೆ.
ಜನಸಂಖ್ಯೆ ಮಿತಿ ಹೆಚ್ಚಿಸುವ ನಿರ್ಧಾರಕ್ಕೆ ವಿರೋಧ ;
ನಿಯಮಾನುಸಾರ ಪ್ರತಿ 1,000 ಜನರಿಗೆ ಒಬ್ಬ ಆಶಾ ಕಾರ್ಯಕರ್ತೆ ನೇಮಕವಾಗಬೇಕು. ಆದರೆ ಹೊಸ ಆದೇಶದಂತೆ ಗ್ರಾಮೀಣ ಪ್ರದೇಶಗಳಲ್ಲಿ ಒಬ್ಬ ಕಾರ್ಯಕರ್ತೆಗೆ 2,000 ಜನರ ಹೊಣೆಗಾರಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ನಗರ ಪ್ರದೇಶಗಳಲ್ಲಿ 50,000ಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ, 2,500ರಿಂದ 3,000 ಜನರ ಹೊಣೆಗಾರಿಕೆ ನೀಡುವ ಪ್ರಸ್ತಾಪವೂ ಇದೆ. ಕಾರ್ಯಕರ್ತೆಯರ ಪ್ರಕಾರ, ಈ ಕ್ರಮದಿಂದ 7,000 ರಿಂದ 8,000 ಆಶಾ ಕಾರ್ಯಕರ್ತೆಯರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದು ಅನ್ಯಾಯಕರ ಕ್ರಮ ಎಂದು ಸಂಘಟನೆ ಆರೋಪಿಸಿದೆ.
ಗೌರವಧನ ಮತ್ತು ಪ್ರೋತ್ಸಾಹಧನ ಸಮಸ್ಯೆ ;
ಪ್ರಸ್ತುತ ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ₹5,000 ಗೌರವಧನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನವೂ ದೊರೆಯುತ್ತದೆ. ಆದರೆ ಪ್ರಾಥಮಿಕ ಆರೋಗ್ಯ ಸಮುದಾಯಾಧಿಕಾರಿ ಹುದ್ದೆಗಳು ಖಾಲಿಯಾಗಿರುವುದರಿಂದ, ಪೋರ್ಟಲ್‌ನಲ್ಲಿ ಮಾಹಿತಿಯನ್ನು ದಾಖಲಿಸಲು ಸಾಧ್ಯವಾಗದೆ ಅನೇಕರು ಪ್ರೋತ್ಸಾಹಧನ ಪಡೆಯಲು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕಾರ್ಯಕರ್ತೆಯರು ತಿಳಿಸಿದ್ದಾರೆ.
ಮುಖ್ಯ ಬೇಡಿಕೆಗಳು ;
ಒಟ್ಟು ಪ್ರೋತ್ಸಾಹಧನವನ್ನು ₹15,000ಕ್ಕೆ ಹೆಚ್ಚಿಸಬೇಕು ರಾಜ್ಯದ ಗೌರವಧನವನ್ನು ₹5,000ರಿಂದ ₹8,000ಕ್ಕೆ ಹೆಚ್ಚಿಸಬೇಕು. ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಒಮ್ಮತ್ತಿನ ಸೌಲಭ್ಯ, ಗಂಭೀರ ರೋಗಗಳಿಗೆ ಚಿಕಿತ್ಸೆ ವೆಚ್ಚದ ನೆರವು ಅಸ್ವಸ್ಥತೆಯ ಅವಧಿಯಲ್ಲಿ ಮಾಸಿಕ ಗೌರವಧನ ಇತ್ಯಾದಿಗಳು… ಈ ಬೇಡಿಕೆಗಳಿಗಾಗಿ ಜನವರಿಯಲ್ಲಿ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದರು. ನಾಲ್ಕನೇ ದಿನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಧ್ಯಪ್ರವೇಶಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಉದ್ಯೋಗ ಭದ್ರತೆ ಮತ್ತು ವೇತನ ಹೆಚ್ಚಳಕ್ಕಾಗಿ ಆಶಾ ಕಾರ್ಯಕರ್ತೆಯರ ಹೋರಾಟ ಮತ್ತೊಮ್ಮೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಮುಷ್ಕರ ಆರೋಗ್ಯ ಸೇವೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ASHA activists call for indefinite strike from February 27 – ತುಳುಟೈಮ್ಸ್
ಇದನ್ನೂ ಓದಿ : ಮಂಗಳೂರು : ಮೊದಲ ಖಾಸಗಿ ಎಲೆಕ್ಟ್ರಿಕ್ ಬಸ್ ಫೆಬ್ರವರಿ 26ರಂದು ಉದ್ಘಾಟನೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/aEbULjkx6vU?si=ZJ0nIbBD6UH2lzkX











