ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ , ಬಜತ್ತೂರಿನಲ್ಲಿ ಹೊಸ ಟೋಲ್ ಪ್ಲಾಜಾ ನಿರ್ಮಾಣ ಅಂತಿಮ ಹಂತದಲ್ಲಿದೆ. ಮುಂದಿನ ಏಪ್ರಿಲ್ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಇದು ಈ ಹೆದ್ದಾರಿಯ 7ನೇ ಟೋಲ್ ಆಗಲಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಆರ್ಥಿಕ ಹೊರೆ ಬೀಳಲಿದೆ. ಮುಂದಿನ ಏಪ್ರಿಲ್ ವೇಳೆಗೆ ಟೋಲ್ ಸಂಗ್ರಹ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.
ಬಿ.ಸಿ. ರೋಡ್‌ನಿಂದ ಪೆರಿಯಶಾಂತಿವರೆಗಿನ ಹೆದ್ದಾರಿ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿರುವ ಕೆ.ಎನ್.ಆರ್. ಕನ್‌ಸ್ಟ್ರಕ್ಷನ್ ಸಂಸ್ಥೆಯೇ ಈ ಬೃಹತ್ ಟೋಲ್ ಪ್ಲಾಜಾವನ್ನು ನಿರ್ಮಿಸುತ್ತಿದೆ. ಉಪ್ಪಿನಂಗಡಿಯಿಂದ 8 ಕಿಲೋ ಮೀಟರ್ ದೂರದ ಬಜತ್ತೂರು ಗ್ರಾಮದ ವಳಾಲು – ನೀರಕಟ್ಟೆ ಮಧ್ಯೆ ಈ ಟೋಲ್‌ಗೇಟ್ ನಿರ್ಮಾಣಗೊಳ್ಳುತ್ತಿದೆ.
ಇಲ್ಲಿ ಎರಡೂ ಬದಿಗಳಲ್ಲಿ ತಲಾ ನಾಲ್ಕು ಲೇನ್‌ಗಳಂತೆ ವಾಹನಗಳು ಸರಾಗವಾಗಿ ಸಾಗಲು ವ್ಯವಸ್ಥೆ ಮಾಡಲಾಗುತ್ತಿದೆ. ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್‌ಗಳನ್ನು ಮೀಸಲಿಡಲಾಗಿದೆ. ಟೋಲ್ ಪ್ಲಾಜಾದ ಕಾಮಗಾರಿ ಬಹುತೇಕ ಮುಗಿದಿದ್ದು, ಇನ್ನು ಒಂದೆರಡು ತಿಂಗಳಲ್ಲಿ ಟೋಲ್ ಪ್ಲಾಜಾ ಸಿದ್ಧವಾಗಲಿದೆ ಎಂದು ಮೇಲ್ವಿಚಾರಕರು ತಿಳಿಸಿದ್ದಾರೆ. ಸದ್ಯ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು, ಇದಾದ ಬಳಿಕ ಟೋಲ್ ಸಂಗ್ರಹ ಆರಂಭಗೊಳ್ಳಲಿದೆ.
2026ರ ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಟೋಲ್ ಸಂಗ್ರಹ ಆರಂಭವಾಗುವ ನಿರೀಕ್ಷೆ ಇದೆ. ಆದರೆ, ಇದಕ್ಕೂ ಮುನ್ನ ಅಧಿಕೃತ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಆ ಬಳಿಕವೇ ಟೋಲ್ ಸಂಗ್ರಹದ ಜವಾಬ್ದಾರಿಯನ್ನು ಯಾರು ವಹಿಸುತ್ತಾರೆ, ದರ ಎಷ್ಟಿದೆ, ಸ್ಥಳೀಯ ವಾಹನಗಳಿಗೆ ಶುಲ್ಕ ವಿನಾಯಿತಿ ಇದೆಯೇ, ಎಂಬುದು ನಿರ್ಧಾರವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ಸ್ಪಷ್ಟಪಡಿಸಿವೆ.
ಇದನ್ನೂ ಓದಿ: GST ಕಡಿತದಿಂದ ರಾಜ್ಯಕ್ಕೆ 15,000 ಕೋಟಿ ರೂ. ನಷ್ಟ; ಸಿಎಂ ಹೇಳಿಕೆಗೆ ಚೌಟ ತಿರುಗೇಟು
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











