Tumkur: ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವುದು ಸರ್ಕಾರದ ಕೆಲಸ. ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಬೇಕು. ಅದರಲ್ಲೂ ಗೃಹ ಇಲಾಖೆ ಸಚಿವರು ಹೀಗೆ ಮಾಡಿದ್ರೆ ಹೇಗೆ? ಹೌದು. ಅಕ್ರಮ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕಾಗಿದ್ದ ಗೃಹ ಇಲಾಖೆ ಸಚಿವರು ಬೆಟ್ಟಿಂಗ್ ಕಟ್ಟಿ ಭಾರೀ ಚರ್ಚೆಗೆ ಗ್ರಾಸರಾಗಿದ್ದಾರೆ. ಈ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ.
ತುಮಕೂರಿನಲ್ಲಿ ಅ.19 ಭಾನುವಾರ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭಾಗಿಯಾಗಿದ್ದಾರೆ. ಈ ವೇಳೆ ಬೆಟ್ಟಿಂಗ್ ಕಟ್ಟಿ 500 ರೂಪಾಯಿ ಕಳೆದುಕೊಂಡಿದ್ದಾರೆ. ತಮಾಷೆಗಾಗಿ ಬೆಟ್ಟಿಂಗ್ ಕಟ್ಟಿದ್ದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಆಗುತ್ತಿವೆ. ಒಂದು ಜವಬ್ದಾರಿಯುತ ಸ್ಥಾನದಲ್ಲಿದ್ದವರು ಈ ರೀತಿ ನಡೆದುಕೊಳ್ಳುವುದು ಸರಿಯೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಪಿಯು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೊಂದಿಗೆ 500 ರೂಪಾಯಿ ಬಾಜಿ ಕಟ್ಟಿದ್ದರು. ಅಂತಿಮ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವು ವಿಜಯಪುರ ತಂಡವನ್ನು ಸೋಲಿಸಿದೆ. ಇದರಿಂದಾಗಿ ಬಾಜಿ ಹಣವನ್ನು ಕಳೆದುಕೊಂಡ ಸಚಿವ ಪರಮೇಶ್ವರ್, ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಈ ವಿಷಯವನ್ನು ಸ್ವತಃ ಬಹಿರಂಗಪಡಿಸಿದ್ದಾರೆ..
ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿದ ನಂತರ ಪರಮೇಶ್ವರ್ ಅವರು ಮಾತನಾಡಿ, ನಾನು 500 ಕಳೆದುಕೊಂಡು ಬಿಟ್ಟೆ. ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಜತೆ ಬೆಟ್ಟಿಂಗ್ ಕಟ್ಟಿದ್ದೆ. ಆದರೆ ಸೋತೆ ಎಂದು ತಾವೇ ಹೇಳಿಕೊಂಡಿದ್ದು, ಈ ಸಂಬಂಧ ಇದೀಗ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ಗೃಹ ಸಚಿವರಾಗಿದ್ದವರು ಬಹಿರಂಗವಾಗಿಯೇ ಬೆಟ್ಟಿಂಗ್ ಆಡಿರುವ ಬಗ್ಗೆ ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕೆಲವರು ತಮಾಷೆಗಾಗಿ ಬೆಟ್ಟಿಂಗ್ ಕಟ್ಟಿದ್ದಾರೆ ಬಿಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Moodabidre : ಟ್ರ‍್ಯಾಕ್ಟರ್ ಸಹಿತ ಬಾವಿಗೆ ಬಿದ್ದು ವ್ಯಕ್ತಿ ಸಾವು.
===================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











