ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

ಬೆಳ್ತಂಗಡಿ ತಾಲ್ಲೂಕಿನಲ್ಲಿ ವಿದ್ಯಾರ್ಥಿನಿ ಅಪಹರಣ ಯತ್ನಕ್ಕೆ ಟ್ವಿಸ್ಟ್

ಮಂಗಳೂರು: Tulu Times| ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ 16 ವರ್ಷದ ವಿದ್ಯಾರ್ಥಿನಿಯ ಅಪಹರಣ ಯತ್ನ ನಡೆದಿದೆ ಎನ್ನಲಾಗಿದ್ದ ಪ್ರಕರಣಕ್ಕೆ ಇದೀಗ ಅಚ್ಚರಿಯ ತಿರುವು ಸಿಕ್ಕಿದ್ದು, ಈ ಘಟನೆ ಸುಳ್ಳು ಎಂದು ಬೆಳ್ತಂಗಡಿ ಪೊಲೀಸರು ಮಂಗಳವಾರ ಬಹಿರಂಗಪಡಿಸಿದ್ದಾರೆ.

ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸೋಮವಾರ ಸ್ಕೂಟಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಸುಡಮೋಗರು ಪ್ರದೇಶದಲ್ಲಿ ಮುಖವಾಡ ಧರಿಸಿದ್ದ ಮೂವರು ವ್ಯಕ್ತಿಗಳು ಆಕೆಯನ್ನು ತಡೆದು ಅಪಹರಿಸಲು ಯತ್ನಿಸಿದ್ದಾರೆ ಎಂದು ಹೇಳಲಾಗಿತ್ತು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಅಬ್ಬುಸಾಲಿ ಎಂಬವರು ಸಹಾಯಕ್ಕೆ ಧಾವಿಸಿದಾಗ, ಆರೋಪಿಗಳು ಓಮ್ನಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಳು.

ಕೈಗಳಲ್ಲಿ ಚೂರಿ ಗಾಯಗಳಾಗಿವೆ ಎಂದು ಹೇಳಲಾಗಿದ್ದ ಬಾಲಕಿಯನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಅಪಹರಣ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಶೇಷ ತಂಡಗಳನ್ನು ರಚಿಸಿದ್ದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಖಾಸಗಿ ಕಾಲೇಜಿಗೆ ಸೇರಿಸಬೇಕೆಂದು ಪೋಷಕರ ಮೇಲೆ ಒತ್ತಡ ಹೇರುವ ಉದ್ದೇಶ ;

ತನಿಖೆ ವೇಳೆ ವಿದ್ಯಾರ್ಥಿನಿ ವಿವರಿಸಿದಂತೆ ಯಾವುದೇ ಓಮ್ನಿ ವಾಹನದ ಸುಳಿವು ಪತ್ತೆಯಾಗಲಿಲ್ಲ. ಅಬ್ಬುಸಾಲಿಯನ್ನು ವಿಚಾರಣೆ ನಡೆಸಿದಾಗ, ತಾನು ಯಾವುದೇ ಮುಖವಾಡಧಾರಿಗಳನ್ನು ನೋಡಿಲ್ಲ ಎಂದು ಆತ ಹೇಳಿಕೆ ನೀಡಿದ್ದಾನೆ. ವಿದ್ಯಾರ್ಥಿನಿ ಸತ್ಯವನ್ನು ಬಹಿರಂಗಪಡಿಸಬೇಡಿ ಎಂದು ಬೇಡಿಕೊಂಡ ಹಿನ್ನೆಲೆಯಲ್ಲಿ ಆತ ಸುಳ್ಳು ಹೇಳಿಕೆಯನ್ನು ಸಮರ್ಥಿಸಿದ್ದಾನೆ ಎಂದು ತಿಳಿದುಬಂದಿದೆ. ವೈದ್ಯಕೀಯ ವರದಿಯಲ್ಲಿ ಕೈಯ ಗಾಯಗಳು ಸ್ವಯಂ ಮಾಡಿಕೊಂಡ ಗಾಯಗಳೆಂದು ದೃಢಪಟ್ಟಿದೆ. ಈ ವಿಚಾರಗಳನ್ನು ಪೊಲೀಸರು ಎದುರು ಹಾಕಿಕೊಂಡಾಗ ವಿದ್ಯಾರ್ಥಿನಿ ಕಣ್ಣೀರಿಟ್ಟುಕೊಂಡು, ತನ್ನನ್ನು ಮಂಗಳೂರು ನಗರದ ಖಾಸಗಿ ಕಾಲೇಜಿಗೆ ಸೇರಿಸಬೇಕೆಂದು ಪೋಷಕರ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಸುಳ್ಳು ಅಪಹರಣ ಕಥೆ ಕಟ್ಟಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ವಿದ್ಯಾರ್ಥಿನಿ ಅಪ್ರಾಪ್ತ ವಯಸ್ಸಿನವರಾಗಿರುವುದರಿಂದ, ಆಕೆಯನ್ನು ಸಲಹಾ ಮತ್ತು ಪುನರ್ವಸತಿ ಉದ್ದೇಶಕ್ಕಾಗಿ ಬೆಳ್ತಂಗಡಿ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ (CDPO) ಅವರ ವಶಕ್ಕೆ ಒಪ್ಪಿಸಲು ಪೊಲೀಸರು ನಿರ್ಧರಿಸಿದ್ದಾರೆ. ಇದೀಗ ಮುಂದಿನ ಕ್ರಮದ ಭಾಗವಾಗಿ, ಅಪ್ರಾಪ್ತ ವಯಸ್ಸಿನ ಮಗಳಿಗೆ ಸ್ಕೂಟಿಯನ್ನು ನೀಡಿದ್ದಕ್ಕಾಗಿ ಬಾಲಕಿಯ ತಂದೆಯ ವಿರುದ್ಧ ಪ್ರಕರಣ ದಾಖಲಿಸುವ ಕುರಿತು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.

Twist in the attempted kidnapping of a student in Belthangady taluk – ತುಳು ಟೈಮ್ಸ್

ಇದನ್ನೂ ಓದಿ : ಲವ್ ಜಿಹಾದ್ ಪ್ರಕರಣ : ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾದ ಯುವತಿ !

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/bXVRChrgqts?si=SQPaxel35P9PQT_S

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page