ಬೆಂಗಳೂರು: Tulu Times | ಕೆರೆಗಳ ನಗರವೆಂದು ಪ್ರಸಿದ್ಧವಾಗಿದ್ದ ಬೆಂಗಳೂರು ಮಹಾನಗರವೀಗ ಜಲಕ್ಷಾಮದ ಗಂಭೀರ ಸವಾಲನ್ನು ಎದುರಿಸುತ್ತಿದ್ದು ಸಮರ್ಪಕ ಜಲ ನಿರ್ವಹಣೆಯತ್ತ ತುರ್ತು ಕ್ರಿಯಾ ಯೋಜನೆ ರೂಪಿಸಬೇಕಾದ ಅಗತ್ಯವಿದೆ ಎಂದು ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ರಮೇಶ್.ಬಿ. ಪ್ರತಿಪಾದಿಸಿದ್ದಾರೆ.
ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಲ, ಇಂಧನ, ಪರಿಸರ ಮತ್ತು ಆರೋಗ್ಯ ಸಂರಕ್ಷಣೆಯ ಕುರಿತಾದ “ವೀಹ್ ಟೆಕ್-2026” ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ತಿಳಿಸಿದರು.
ನೀರು ಕೇವಲ ಒಂದು ಸಂಪನ್ಮೂಲವಾಗಿರದೆ ಜೀವನ ಮತ್ತು ಜೀವನೋಪಾಯದ ಸಾಧನವೂ ಆಗಿದೆ, ಆದರೂ ಅದರ ಮಹತ್ವವನ್ನು ಕಡೆಗಣಿಸಿ ದುರ್ಬಳಕೆಯ ಮೂಲಕ ಅತ್ಯಂತ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸುರಕ್ಷಿತ ಇಂಧನ ಪೂರೈಕೆ, ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಆರೋಗ್ಯ ಸಂರಕ್ಷಣೆ ಸಹ ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ತಮ್ಮ ವಿಶ್ವವಿದ್ಯಾನಿಲಯ ಸಕ್ರಿಯವಾಗಿ ಕೈಜೋಡಿಸಲು ಸಿದ್ಧವಿದೆ ಎಂದು ಅವರು ಭರವಸೆಯಿತ್ತರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷರಾದ ಪ್ರೊ. ಟಿ.ಜಿ. ಸೀತಾರಾಮ್ ಮಾತನಾಡಿ, ನಗರ ಮತ್ತು ಗ್ರಾಮಗಳಲ್ಲಿ ಮಳೆ ನೀರು ಕೊಯ್ಲಿಗೆ ಹಾಗೂ ತ್ಯಾಜ್ಯ ನೀರಿನ ಮರುಬಳಕೆಗೆ ವಿಸ್ತೃತವಾದ ಯೋಜನೆ ಹಮ್ಮಿಕೊಳ್ಳಬೇಕೆಂದು ಸಲಹೆಯಿತ್ತರು. ಆಹಾರ ಭದ್ರತೆಯಂತೆ ಜಲ ಭದ್ರತೆಯೂ ಅತಿಮುಖ್ಯವಾಗಿದ್ದು ಇದರ ಜೊತೆಗೆ ಇಂಧನ ಕ್ಷಮತೆ ಮತ್ತು ಪರಿಸರ ಸಂರಕ್ಷಣೆ ಸುಸ್ಥಿರ ಅಭಿವೃದ್ಧಿಗೆ ಮೂಲಾಧಾರಗಳಾಗಿವೆ ಎಂದು ಅವರು ವಿವರಿಸಿದರು.
ಸಮ್ಮೇಳನದ ತಾಂತ್ರಿಕ ಅಧ್ಯಕ್ಷರಾದ ಮಾಜಿ ಶಾಸಕ ಡಾ. ಎ. ನಾರಾಯಣಸ್ವಾಮಿ ತಮ್ಮ ಪ್ರಧಾನ ಭಾಷಣದಲ್ಲಿ ಜಲ ಮತ್ತು ಇಂಧನ ಭದ್ರತೆ ಹಾಗೂ ಹವಾಮಾನ ಬದಲಾವಣೆ ಸಮಸ್ಯೆಗಳು ಇಡೀ ಜಗತ್ತನ್ನು ಕಾಡುತ್ತಿವೆ ಎಂದು ತಿಳಿಸಿದರು. ಪ್ರಾಕೃತಿಕ ಸಂಪನ್ಮೂಲಗಳ ದುರ್ಬಳಕೆ ಹಾಗೂ ಪರಿಸರ ಮಾಲಿನ್ಯದಿಂದಾಗಿ ಜನರ ಆರೋಗ್ಯಕ್ಕೂ ಕುತ್ತು ಬಂದಿದೆ, ಹೀಗಾಗಿ ಮಾನವ ಕುಲದ ಉಳಿವಿಗಾಗಿ ಪರಿಣಾಮಕಾರಿ ಕಾರ್ಯಕ್ರಮ ರೂಪಿಸಬೇಕಿದೆ ಎಂದು ಅವರು ಸೂಚಿಸಿದರು.
ಚಿಕಾಗೋದ WWM ಇಂಟರ್ ನ್ಯಾಷನಲ್ ಸಂಸ್ಥೆಯ ನಿಯೋಗ ಹಾಗೂ ವಿವಿಧ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ವಿಶ್ವವಿದ್ಯಾನಿಲಯದ ಕುಲಸಚಿವರಾದ (ಮೌಲ್ಯಮಾಪನ) ರಮೇಶ್ ಕುಡೇನಟ್ಟಿ, ಪರಿಸರ ತಜ್ಞರಾದ ಡಾ.ರಾಂಪುರ್ ವಿಶ್ವನಾಥ್, ವೀಹ್ ಟೆಕ್ ಸಂಘಟಕರಾದ ಪ್ರೊ. ಇನಾಯತುಲ್ಲಾ, ಪವನ್ ಕುಮಾರ್ ಮತ್ತು ಯೋಗಿಂಧರ್ ಪೂಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮ್ಮೇಳನದ ಅಂಗವಾಗಿ ತಾಂತ್ರಿಕ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು.
Bangalore, the city of lakes, fears water scarcity: Chancellor Prof. Ramesh B. Anxiety- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











