ಬೆಂಗಳೂರು : Tulu Times l ಮಂಗಳೂರು ಮತ್ತು ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿರುತ್ತಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಸನ–ಮಂಗಳೂರು ರೈಲು ಮಾರ್ಗದ ವಿದ್ಯುತೀರಣ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಸ್ತುತ ಪರೀಕ್ಷೆ ಹಾಗೂ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಈ ಪ್ರಕ್ರಿಯೆಗಳು ಮುಗಿದ ಬಳಿಕ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ನಂತರ ವಂದೇ ಭಾರತ್ ಸೇವೆಯನ್ನು ಕರಾವಳಿ ಕರ್ನಾಟಕದ ಕಾರವಾರವರೆಗೆ ವಿಸ್ತರಿಸಲಾಗುವುದು ಎಂದರು. ಇದೇ ವೇಳೆ, ಬೆಂಗಳೂರು–ಮುಂಬೈ ನಡುವಿನ ಪ್ರೀಮಿಯಂ ರೈಲು ಸೇವೆಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಅವರು ಹೇಳಿದರು. ಪುಣೆ–ಬೆಂಗಳೂರು ರೈಲು ಕಾರಿಡಾರ್ಗೆ ಸಂಬಂಧಿಸಿದ ಬೇಡಿಕೆಯನ್ನೂ ಪರಿಗಣಿಸಲಾಗುವುದು ಎಂದು ತಿಳಿಸಿದರು.
ಕರಾವಳಿ ಪ್ರದೇಶಕ್ಕೆ ಎರಡು ವಂದೇ ಭಾರತ್ ರೈಲುಗಳನ್ನು ನಿಯೋಜಿಸಲಾಗುವುದು ;
ಒಂದು ಕರಾವಳಿಯಿಂದ ಬೆಂಗಳೂರು ಕಡೆಗೆ, ಮತ್ತೊಂದು ಬೆಂಗಳೂರಿನಿಂದ ಕರಾವಳಿ ಕಡೆಗೆ ಸಂಚರಿಸಲಿದೆ. ಪ್ರಸ್ತುತ ಕರ್ನಾಟಕದಲ್ಲಿ 12 ಜೋಡಿ ವಂದೇ ಭಾರತ್ ರೈಲುಗಳು ಕಾರ್ಯಾಚರಣೆಯಲ್ಲಿವೆ ಎಂದು ಸಚಿವರು ಹೇಳಿದರು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಭಾಗಗಳಿಗೂ ವಂದೇ ಭಾರತ್ ಸೇವೆ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಹೈಸ್ಪೀಡ್ ರೈಲು ಯೋಜನೆಗಳ ಕುರಿತು ಮಾತನಾಡಿದ ವೈಷ್ಣವ್, ಬೆಂಗಳೂರು–ಚೆನ್ನೈ ನಡುವಿನ ಪ್ರಯಾಣ ಸಮಯವನ್ನು 73 ನಿಮಿಷಗಳಿಗೆ ಕಡಿಮೆ ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರು–ಹೈದರಾಬಾದ್ ನಡುವಿನ ಪ್ರಯಾಣ ಕೇವಲ ಎರಡು ಗಂಟೆಗಳಲ್ಲೇ ಸಾಧ್ಯವಾಗಲಿದೆ ಎಂದರು. ದಕ್ಷಿಣ ಭಾರತದ ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ‘ಡೈಮಂಡ್ ಕಾರಿಡಾರ್’ ಯೋಜನೆಯ ಕೆಲಸವೂ ಮುಂದುವರಿದಿದೆ ಎಂದು ತಿಳಿಸಿದರು. ಇದಲ್ಲದೆ, ಬೆಂಗಳೂರು ಉಪನಗರ ರೈಲು ಯೋಜನೆಯ ನಾಲ್ಕೂ ಕಾರಿಡಾರ್ಗಳ ಕಾಮಗಾರಿ ವೇಗ ಪಡೆದುಕೊಂಡಿದೆ. ವಿನ್ಯಾಸ ಹಾಗೂ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಅರ್ಧಕ್ಕಿಂತ ಹೆಚ್ಚು ಮಾರ್ಗಗಳು ಎಲಿವೇಟೆಡ್ ಆಗಿರುವುದರಿಂದ ವಿಶೇಷ ವಿನ್ಯಾಸಗಳನ್ನು ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದರು.
Vande Bharat train service between Mangalore-Bangalore to start soon: Ashwini Vaishnav – ತುಳು ಟೈಮ್ಸ್
ಇದನ್ನೂ ಓದಿ : ಡಿಜಿಟಲ್ ವಂಚನೆಗೆ ಒಳಗಾದವರಿಗೆ ಆರ್ ಬಿಐಯಿಂದ ಪರಿಹಾರ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/bXVRChrgqts?si=SQPaxel35P9PQT_S











