ನವದೆಹಲಿ : Tulu Times | ಕಳೆದ ವರ್ಷ ಜೂನ್ 12ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ಸಮ್ಮತಿ ಸೂಚಿಸಿದೆ.
AI171 ವಿಮಾನ ಪತನದಲ್ಲಿ 260 ಮಂದಿ ಮೃತಪಟ್ಟಿದ್ದು, ಪ್ರಕರಣದ ಅಧಿಕೃತ ತನಿಖೆ ಸಮರ್ಪಕವಾಗಿಲ್ಲ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ‘ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್’ ಎಂಬ ಎನ್‌ಜಿಓ ಅರ್ಜಿ ಸಲ್ಲಿಸಿದೆ. ಎನ್‌ಜಿಓ ಪರ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿ, ಸರ್ಕಾರ ಹಾಗೂ ವಿಮಾನ ಅಪಘಾತ ತನಿಖಾ ಮಂಡಳಿ (AAIB) ಇದುವರೆಗೆ ಯಾವುದೇ ಉತ್ತರ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಬೋಯಿಂಗ್ 787 ವಿಮಾನದಲ್ಲಿ ತಾಂತ್ರಿಕ ದೋಷವಿದ್ದು, ಅವುಗಳನ್ನು ನೆಲಕ್ಕಿಳಿಸಬೇಕೆಂದು ಪೈಲಟ್ ಸಂಘಟನೆಗಳು ಒತ್ತಾಯಿಸುತ್ತಿವೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಜಿಓ, ಒಬ್ಬ ಕಾನೂನು ವಿದ್ಯಾರ್ಥಿ ಹಾಗೂ ಮೃತ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ತಂದೆ ಸೇರಿ ಒಟ್ಟು ಮೂರು ಅರ್ಜಿಗಳು ಸಲ್ಲಿಕೆಯಾಗಿವೆ. ಪೈಲಟ್‌ಗಳ ಫೆಡರೇಷನ್ ನ್ಯಾಯಾಲಯ ಮೇಲ್ವಿಚಾರಣೆಯ ತನಿಖೆಗೆ ಮನವಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಶೀಲನೆ ಪ್ರಕರಣಗಳ ವಿಚಾರಣೆ ಪೂರ್ಣಗೊಂಡ ಬಳಿಕ ಶೀಘ್ರ ವಿಚಾರಣೆಯ ದಿನಾಂಕ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ನವೆಂಬರ್ 13ರಂದು ಸುಪ್ರೀಂ ಕೋರ್ಟ್, AAIB ಪ್ರಾಥಮಿಕ ವರದಿಯಲ್ಲಿ ಪೈಲಟ್‌ಗಳ ಮೇಲೆ ದೋಷಾರೋಪಣೆ ಮಾಡಲಾಗಿಲ್ಲ ಎಂದು ಹೇಳಿದ್ದು, ವರದಿಯ ಆಯ್ದ ಭಾಗಗಳನ್ನು ಮಾತ್ರ ಪ್ರಕಟಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು. ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787-8 ವಿಮಾನ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದ್ದು, 169 ಭಾರತೀಯರು, 52 ಬ್ರಿಟಿಷ್ ನಾಗರಿಕರು ಸೇರಿ 260 ಮಂದಿ ಮೃತಪಟ್ಟಿದ್ದರು. ಒಬ್ಬರು ಮಾತ್ರ ಬದುಕುಳಿದಿದ್ದರು.
Air India plane crash case: Supreme Court agrees to hear petition seeking investigation – ತುಳು ಟೈಮ್ಸ್
ಇದನ್ನೂ ಓದಿ : ಕಾಂಗ್ರೆಸ್ ಮುಖಂಡನ ಮಹಾಮೋಸಕ್ಕೆ ಬೆಚ್ಚಿಬಿತ್ತು ಸುರತ್ಕಲ್
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/yx1fqcpWfnc?si=CKym_5_zMgabSl3Y











