ಬೆಳ್ತಂಗಡಿ : Tulu Times | ಇತ್ತೀಚಿನ ವಾರಗಳಲ್ಲಿ ಬೆಳ್ತಂಗಡಿ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಚಿರತೆ ಸಂಚರಿಸಿದ ವರದಿಗಳ ಹಿನ್ನೆಲೆಯಲ್ಲಿ, ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ಸುತ್ತೋಲೆ ಹೊರಡಿಸಿದ್ದಾರೆ.
ಶಿಕ್ಷಕರು ಹಾಗೂ ಪಾಲಕರಿಂದ ಬಂದ ಆತಂಕದ ಹಿನ್ನೆಲೆಯಲ್ಲೇ ಈ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಲ್ಲಾ ಶಿಕ್ಷಕರೂ ಒಟ್ಟಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಸಾಧ್ಯವಾದಷ್ಟು ಮಕ್ಕಳನ್ನು ಪಾಲಕರು ಶಾಲೆಗೆ ಕರೆತರುವುದು, ಕರೆದೊಯ್ಯುವುದು ಕಡ್ಡಾಯಗೊಳಿಸಲಾಗಿದ್ದು, ಮಕ್ಕಳನ್ನು ಬೆಳಗ್ಗೆ 9.30ರೊಳಗೆ ಶಾಲೆಗೆ ತಲುಪುವಂತೆ ಮನೆಯಿಂದ ಕಳುಹಿಸಲು ಪಾಲಕರಿಗೆ ಸೂಚಿಸಲಾಗಿದೆ.
ವಿದ್ಯಾರ್ಥಿಗಳನ್ನು ಸಂಜೆ 4.20ಕ್ಕೆ ಮಾತ್ರ ಪಾಲಕರ ಜವಾಬ್ದಾರಿಯಲ್ಲಿ ಬಿಡುಗಡೆ ಮಾಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಸುರಕ್ಷಿತವಾಗಿ ಶಾಲೆಯಿಂದ ಹೊರಡುವವರೆಗೆ ಮುಖ್ಯ ಶಿಕ್ಷಕರು ಹಾಗೂ ನಿಗದಿತ ಸಿಬ್ಬಂದಿ ಶಾಲಾ ಆವರಣದಲ್ಲಿ ಇರುವಂತೆ ಆದೇಶಿಸಲಾಗಿದೆ. ಶಾಲಾ ಅವಧಿಯಲ್ಲಿ ಮಕ್ಕಳನ್ನು ಬೇರೆ ಸಮಯದಲ್ಲಿ ಆವರಣದಿಂದ ಹೊರ ಹೋಗಲು ಬಿಡಬಾರದು ಹಾಗೂ ನಿರಂತರ ಮೇಲ್ವಿಚಾರಣೆ ಕಡ್ಡಾಯವಾಗಿದೆ.
ಶಾಲೆಗಳಿಗೆ ಕಟ್ಟುನಿಟ್ಟಿನ ಭದ್ರತಾ ಮಾರ್ಗಸೂಚಿ ;
ಮಕ್ಕಳು ಆಟವಾಡಲು ಅಥವಾ ಶೌಚಾಲಯಕ್ಕೆ ಹೋಗುವಾಗ ಶಿಕ್ಷಕರ ಮೇಲ್ವಿಚಾರಣೆಯಲ್ಲೇ, ಗುಂಪುಗಳಾಗಿ ಹೋಗಬೇಕು. ಸಂಜೆ ವಿಶೇಷ ತರಗತಿಗಳನ್ನು ನಡೆಸಬಾರದು ಹಾಗೂ ಮಕ್ಕಳು ಮನೆ ತಲುಪಿದ ನಂತರ ಮಾತ್ರ ಆನ್ಲೈನ್ ತರಗತಿಗಳನ್ನು ನಡೆಸಬೇಕು ಎಂದು ಸೂಚಿಸಲಾಗಿದೆ. ಚಿರತೆ ಸಂಚರಣೆ ಹೆಚ್ಚಿರುವ ಪ್ರದೇಶಗಳಲ್ಲಿ ಮಕ್ಕಳಿಗೆ ಶಾಲೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಬಹುದಾಗಿದ್ದು, ಅವರ ಸುರಕ್ಷತೆಯನ್ನು ಮನೆಯಲ್ಲಿ ಪಾಲಕರು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ. ಅರಣ್ಯ ಪ್ರದೇಶಗಳ ಸಮೀಪ ಇರುವ ಶಾಲೆಗಳಲ್ಲಿ ತರಗತಿಗಳನ್ನು ಬಾಗಿಲು ಮುಚ್ಚಿಕೊಂಡೇ ನಡೆಸಬೇಕು. ಮಕ್ಕಳು ತರಗತಿ ಕೊಠಡಿಯ ಹೊರಗೆ ಹೋಗುವಾಗ ಶಿಕ್ಷಕರು ಕಡ್ಡಾಯವಾಗಿ ಜೊತೆಯಲ್ಲಿ ಇರಬೇಕು. ಶಿಕ್ಷಕರು ಸದಾ ಎಚ್ಚರಿಕೆಯಿಂದ ಇರಬೇಕು, ಸಾಧ್ಯವಾದಷ್ಟು ವಾಹನಗಳನ್ನು ಬಳಸಬೇಕು, ಒಂಟಿ ಹಾಗೂ ಅಪಾಯಕಾರಿ ಮಾರ್ಗಗಳಲ್ಲಿ ನಡೆದು ಹೋಗುವುದನ್ನು ತಪ್ಪಿಸಬೇಕು ಹಾಗೂ ಎಲ್ಲಾ ಮಕ್ಕಳು ಸುರಕ್ಷಿತವಾಗಿ ಹೊರಟ ನಂತರವೇ ಶಾಲೆಯಿಂದ ತೆರಳಬೇಕು ಎಂದು ಸುತ್ತೋಲೆ ತಿಳಿಸಿದೆ.
ಶಾಲೆಗೆ ಮಕ್ಕಳು ಬರುವ ಸಮಯದಿಂದ ಮನೆ ತಲುಪುವವರೆಗೆ ಅವರ ಸಂಪೂರ್ಣ ಸುರಕ್ಷತೆಯ ಜವಾಬ್ದಾರಿ ಶಾಲಾ ಸಿಬ್ಬಂದಿಯ ಮೇಲಾಗಿದ್ದು, ಈ ವನ್ಯಜೀವಿ ಆತಂಕದ ನಡುವೆ ಶಿಕ್ಷಕರು ತಮ್ಮ ಸ್ವಂತ ಸುರಕ್ಷತೆಯನ್ನೂ ಗಮನಿಸಬೇಕೆಂದು ಬಿಇಒ ತರಕೇಶರಿ ಮನವಿ ಮಾಡಿದ್ದಾರೆ.
Leopard movement in Belthangady taluk: Strict security guidelines for schools – ತುಳು ಟೈಮ್ಸ್
ಇದನ್ನೂ ಓದಿ : ಪುತ್ತೂರು: ಬಾರ್ ಮಾಲೀಕನಿಗೆ ಕೆಲಸಗಾರನಿಂದ ಹಲ್ಲೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/yx1fqcpWfnc?si=rBHvro9wAxjJgbRE











