ಮುಂಬೈ : Tulu Times | ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಆಸ್ಕರ್ ಪ್ರಶಸ್ತಿ ಪಡೆದ ‘ಜೈ ಹೋ’ ಹಾಡಿನ ರಚನೆ ಕುರಿತು ತಮ್ಮ ಹಿಂದಿನ ಹೇಳಿಕೆಗಳಿಂದ ಉಂಟಾದ ವಿವಾದದ ಬಳಿಕ, ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ಆರ್‌ಜಿವಿ) ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿದ್ದಾರೆ. ಹಾಡಿನ ನಿಜವಾದ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಅವರೇ ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.
ಹಳೆಯ ಸಂದರ್ಶನದ ಒಂದು ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ವಿವಾದ ಮತ್ತೆ ಜೀವ ಪಡೆದಿತ್ತು. ಆ ಕ್ಲಿಪ್‌ನಲ್ಲಿ, ‘ಜೈ ಹೋ’ ಹಾಡನ್ನು ರಚಿಸಿದ್ದು ಗಾಯಕ ಸುಖ್ವಿಂದರ್ ಸಿಂಗ್ ಎಂಬಂತೆ ವರ್ಮಾ ಸೂಚಿಸಿದಂತಿತ್ತು. ಆದರೆ ಈ ಹಾಡಿಗೆ ಆಸ್ಕರ್ ಪ್ರಶಸ್ತಿ ಪಡೆದಿರುವುದು ಎ ಆರ್ ರಹಮಾನ್ ಅವರ ಸಂಗೀತ ನಿರ್ದೇಶನಕ್ಕೆ. ವಿವಾದದ ಹಿನ್ನೆಲೆ ವರ್ಮಾ ‘ಎಕ್ಸ್’ (ಹಳೆಯ ಟ್ವಿಟರ್)ನಲ್ಲಿ ಪ್ರತಿಕ್ರಿಯಿಸಿ, ತಮ್ಮ ಮಾತುಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದ್ದು, ಸಂದರ್ಭದಿಂದ ಬೇರ್ಪಡಿಸಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.
ನನ್ನ ದೃಷ್ಟಿಯಲ್ಲಿ @arrahman ಅವರು ನಾನು ಕಂಡ ಅತ್ಯಂತ ಶ್ರೇಷ್ಠ ಸಂಗೀತ ನಿರ್ದೇಶಕ ಹಾಗೂ ಅತ್ಯಂತ ಸೌಮ್ಯ ವ್ಯಕ್ತಿ. ಅವರು ಯಾರದ್ದಾದರೂ ಗೌರವ ಅಥವಾ ಕ್ರೆಡಿಟ್ ಕಸಿದುಕೊಳ್ಳುವ ಕೊನೆಯ ವ್ಯಕ್ತಿ, ಎಂದು ವರ್ಮಾ ಬರೆದುಕೊಂಡಿದ್ದಾರೆ. ಈ ಸ್ಪಷ್ಟನೆ ವಿವಾದಕ್ಕೆ ತೆರೆ ಹಾಕಲಿದೆ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ಸಂದರ್ಶನದಲ್ಲಿ, ವರ್ಮಾ ಅವರು ಎಆರ್ ರಹಮಾನ್, ನಿರ್ದೇಶಕ ಸುಭಾಷ್ ಘೈ ಮತ್ತು ಗಾಯಕ ಸುಖ್ವಿಂದರ್ ಸಿಂಗ್ ಸಂಬಂಧಿಸಿದ ಒಂದು ಘಟನೆಯನ್ನು ವಿವರಿಸಿದ್ದರು. ಘೈ ಅವರ ಯುವರಾಜ್ ಚಿತ್ರದ ಸಂಗೀತ ತಡವಾದ ಸಂದರ್ಭದಲ್ಲಿ, ಸುಖ್ವಿಂದರ್ ಸಿಂಗ್ ಸ್ಟುಡಿಯೊದಲ್ಲಿ ರೂಪುಗೊಂಡ ಒಂದು ಹಾಡು ನಂತರ ‘ಜೈ ಹೋ’ ಆಗಿ ಸ್ಲಂ ಡಾಗ್ ಮಿಲಿಯನೇರ್ ಚಿತ್ರದಲ್ಲಿ ಬಳಕೆಯಾಯಿತು ಎಂದು ಅವರು ಹೇಳಿದ್ದರು.
ಇದಲ್ಲದೆ, ಆ ಹಾಡನ್ನು ಮಾರಾಟ ಮಾಡಿದ ನಂತರ ರಹಮಾನ್ ತಂಡವು ಸುಖ್ವಿಂದರ್ ಸಿಂಗ್ ಅವರಿಗೆ ಹಣ ನೀಡಿತ್ತು ಎಂದು ವರ್ಮಾ ಆರೋಪಿಸಿದ್ದರು. ಇದರಿಂದ ಗಾಯಕನ ಪಾತ್ರ ಕೇವಲ ಗಾಯನಕ್ಕೆ ಸೀಮಿತವಲ್ಲ ಎಂಬ ಸೂಚನೆ ನೀಡಲಾಗಿತ್ತು. ಆದರೆ ಈ ಆರೋಪಗಳನ್ನು ಸುಖ್ವಿಂದರ್ ಸಿಂಗ್ ತೀವ್ರವಾಗಿ ತಳ್ಳಿಹಾಕಿದ್ದಾರೆ. ಹಿಂದೂಸ್ತಾನ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಅವರು, “ರಾಮ್ ಗೋಪಾಲ್ ವರ್ಮಾ ಜೀ ಸಣ್ಣ ವ್ಯಕ್ತಿ ಅಲ್ಲ. ಅವರಿಗೆ ತಪ್ಪು ಮಾಹಿತಿ ಸಿಕ್ಕಿರಬಹುದು,” ಎಂದು ಹೇಳಿ, ತಾವು ಕೇವಲ ಆ ಹಾಡಿನ ಗಾಯಕ ಮಾತ್ರ, ಸಂಗೀತ ನಿರ್ದೇಶಕ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿವಾದದ ನಡುವೆಯೂ ಅಧಿಕೃತ ದಾಖಲೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ‘ಜೈ ಹೋ’ ಹಾಡಿನ ಸಂಗೀತ ನಿರ್ದೇಶಕ ಎಬಆರ್ ರಹಮಾನ್ ಮತ್ತು ಗಾಯಕ ಸುಖ್ವಿಂದರ್ ಸಿಂಗ್ ಎಂಬ ಕ್ರೆಡಿಟ್‌ಗಳು ಯಥಾವತ್ತಾಗಿವೆ. ಜಾಗತಿಕ ಮಟ್ಟದಲ್ಲಿ ಅಪಾರ ಖ್ಯಾತಿ ಪಡೆದ ಈ ಹಾಡು ಆಸ್ಕರ್ ಪ್ರಶಸ್ತಿಯನ್ನೂ ಗೆದ್ದಿರುತ್ತದೆ.
AR Rahman is the real music director: RGV clarifies – ತುಳು ಟೈಮ್ಸ್
ಇದನ್ನೂ ಓದಿ : ಇನ್ನು ಆಟಕ್ಕೆ ಸಾಮರ್ಥ್ಯವಿಲ್ಲ : ಬ್ಯಾಡ್ಮಿಂಟನ್ ಗೆ ವಿದಾಯ ಹೇಳಲಿರುವ ದಿಗ್ಗಜೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/XyP1Yl5GcG0?si=YrCKOC5S6ZXrG-9_











