ಬೆಂಗಳೂರು : Tulu Times | ರಾಜ್ಯದ ಶಾಲಾ ಬಾಲಕಿಯರಿಗೆ ಮೆನ್ಸ್ಟ್ರುವಲ್ ಕಪ್ ವಿತರಿಸುವ ಮಹತ್ವದ ಯೋಜನೆಯನ್ನು ಕರ್ನಾಟಕ ಆರೋಗ್ಯ ಇಲಾಖೆ ಮುಂದಿನ ಎರಡು ತಿಂಗಳಲ್ಲಿ ಜಾರಿಗೊಳಿಸಲು ಸಜ್ಜಾಗಿದೆ. ಇದರ ಭಾಗವಾಗಿ ಶಿಕ್ಷಕರು ಹಾಗೂ ತಾಯಂದಿರಿಗೆ ತರಬೇತಿ ನೀಡುವುದರ ಜೊತೆಗೆ ರಾಜ್ಯವ್ಯಾಪಿ ಜಾಗೃತಿ ಅಭಿಯಾನ ಆರಂಭಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಈ ಯೋಜನೆ ಪ್ರಾಥಮಿಕವಾಗಿ 9ರಿಂದ 12ನೇ ತರಗತಿ ವಿದ್ಯಾರ್ಥಿನಿಯರ ಮೇಲೆ ಕೇಂದ್ರೀಕರಿಸಲಿದ್ದು, ಹಂತ ಹಂತವಾಗಿ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಮೆನ್ಸ್ಟ್ರುವಲ್ ಕಪ್ ವಿತರಣೆ ಮಾಡಲಾಗುತ್ತದೆ. ಬಾಲಕಿಯರು ಸುಲಭವಾಗಿ ಈ ಹೊಸ ವಿಧಾನಕ್ಕೆ ಹೊಂದಿಕೊಳ್ಳಲು, ಕಪ್ ಜೊತೆಗೆ ಆರು ತಿಂಗಳಿಗೆ ಸಾಕಾಗುವಷ್ಟು ಸ್ಯಾನಿಟರಿ ಪ್ಯಾಡ್‌ಗಳನ್ನೂ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆನ್ಸ್ಟ್ರುವಲ್ ಕಪ್‌ಗಳ ಸರಿಯಾದ ಬಳಕೆ ಹೆಚ್ಚಿಸಲು ಆರೋಗ್ಯ ಇಲಾಖೆ ವಿವಿಧ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿ, ಶಿಕ್ಷಕರು ಮತ್ತು ತಾಯಂದಿರಿಗೆ ತರಬೇತಿ ನೀಡಲು ಯೋಜಿಸಿದೆ. ಇದರಿಂದ ಅವರು ವಿದ್ಯಾರ್ಥಿನಿಯರ ಸಂಶಯಗಳಿಗೆ ಉತ್ತರ ನೀಡಿ ಮಾರ್ಗದರ್ಶನ ನೀಡಲು ಸಾಧ್ಯವಾಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಮಾತನಾಡಿ, 9ರಿಂದ 12ನೇ ತರಗತಿಯ ಬಾಲಕಿಯರಿಗೆ ಮೆನ್ಸ್ಟ್ರುವಲ್ ಕಪ್ ಪೂರೈಕೆ ಮಾಡಲು ಆದೇಶ ಹೊರಡಿಸಲಾಗಿದೆ. ಎಲ್ಲ ಇಲಾಖೆಗಳಿಗೂ ಅಗತ್ಯ ಹಣವನ್ನು ಒದಗಿಸಲಾಗಿದ್ದು, ವಿದ್ಯಾರ್ಥಿನಿಯರಿಗೆ ನೇರವಾಗಿ ವಿತರಿಸಲಾಗುತ್ತದೆ, ಎಂದು ಹೇಳಿದರು.
ಈ ಯೋಜನೆಗಾಗಿ ಸರ್ಕಾರವು ರೂ. 71 ಕೋಟಿ ಮೀಸಲಿಟ್ಟಿದ್ದು, ಸರಬರಾಜು ಪ್ರಕ್ರಿಯೆಯಲ್ಲಿ ಯಾವುದೇ ಮಧ್ಯವರ್ತಿಗಳು ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಸ್ತ್ರೀರೋಗ ತಜ್ಞೆ ಡಾ. ಮೀನಾಕ್ಷಿ ಭರತ್ ಅವರು ಮನೆಯ ಮಟ್ಟದಲ್ಲೂ ಜಾಗೃತಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳು ತಮ್ಮ ತಾಯಂದಿರಿಗೆ ಇದರ ಸ್ವಚ್ಛತೆ ಕುರಿತು ತಿಳಿಸಬೇಕು. ತಾಯಂದಿರಿಗೆ ಸರಿಯಾದ ಅರಿವು ಬಂದರೆ ಮಕ್ಕಳು ಇನ್ನಷ್ಟು ಆರೋಗ್ಯವಾಗಿರುತ್ತಾರೆ, ಎಂದರು. ಅಂಗನವಾಡಿ ಕಾರ್ಯಕರ್ತರು ಹಾಗೂ ಶಿಕ್ಷಕರಿಗೂ ಮೆನ್ಸ್ಟ್ರುವಲ್ ಕಪ್ ಬಳಕೆಯ ಕುರಿತು ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
Distribution of menstrual cups to school girls: Training for teachers, mothers – ತುಳು ಟೈಮ್ಸ್
ಇದನ್ನೂ ಓದಿ : ಕೊಲ್ಲೂರಿನಲ್ಲಿ ಸೌಪರ್ಣಿಕಾ ನದಿ ಮಾಲಿನ್ಯ : ತ್ಯಾಜ್ಯ ನೀರು ನದಿಗೆ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/XyP1Yl5GcG0?si=YrCKOC5S6ZXrG-9_











