ನಾಟಕ : Tulu Times | ಕೊಡಲ್ಲ ಅಂದ್ರೆ ಕೊಡಲ್ಲ…. ಅದ್ಭುತ ನಿರ್ದೇಶನ, ಅದ್ಭುತ ಕಲಾವಿದರು, ಅದ್ಭುತ ವಿಷಯವನ್ನಾಧಾರಿತ ನಾಟಕ. ಕಲಾಪ್ರೇಕ್ಷಕ ಯಾರೇ ಆದರೂ ಮೂಕವಿಸ್ಮಿತರಾಗಿ, ಜೊತೆಗೊಮ್ಮೊಮ್ಮೆ ನಗುವಿನ ಸಾಗರದಲ್ಲಿ ಮುಳುಗಿ ಏಳಿಸುವ ಈ ನಾಟಕ ನಿಜವಾಗಿಯೂ ಅದ್ಭುತ ಅಂತಾನೇ ಹೇಳ್ಬೋದು. ಹೌದು… ನಿನ್ನೆ (ಜನವರಿ 19, ಸೋಮವಾರ) ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ನಡೆದ ಮೈಸೂರಿನ ನಿರ್ದಿಗಂತ ತಂಡದ ‘ಕೊಡಲ್ಲ ಅಂದ್ರೆ ಕೊಡಲ್ಲ’ ಎಂಬ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ನಾಟಕವು ದಾರಿಯೋ ಫೋ ರವರ ‘ಕಾಂಟ್ ಪೇ ವೊಂಟ್ ಪೇ’ ನಾಟಕದ ರೂಪಾಂತರವಾಗಿದ್ದು, ಕನ್ನಡದಲ್ಲಿ ನಿರ್ದೇಶನ, ಪರಿಕಲ್ಪನೆ ಹಾಗೂ ವಿನ್ಯಾಸ ಮಾಡಿದವರು ಶಕೀಲ್ ಅಹ್ಮದ್.
ಅರ್ಥಗತವಾಗಿ ಜೀವ ತುಂಬಿಸಿದ ಕಲಾವಿದರ ಎನರ್ಜಿ ;
ಇದು ಬೆಲೆ ಏರಿಕೆ, ಆರ್ಥಿಕ ಸಂಕಷ್ಟ ಮತ್ತು ಹೆಚ್ಚುತ್ತಿರುವ ತೆರಿಗೆಯನ್ನು ವಿರೋಧಿಸಿ ನಿಲ್ಲುವ ಒಂದು ರಾಜಕೀಯ ನಾಟಕವಾಗಿರುತ್ತದೆ. ಆಹಾರದ ಬೆಲೆ ಏರಿಕೆಯಿಂದ ಕೋಪಗೊಂಡ ಮಹಿಳೆಯರ ಗುಂಪೊಂದು ಸೂಪರ್ ಮಾರ್ಕೆಟ್‌ಗೆ ದಾಳಿ ಮಾಡಿ ಹಣ ನೀಡದೆ ದಿನಸಿಗಳನ್ನು ತೆಗೆದುಕೊಂಡು ಹೋಗುವುದರೊಂದಿಗೆ ಶುರುವಾಗುವ ಕಥೆ, ಮಹಿಳೆಯರೆಲ್ಲ ತಮ್ಮ ಗಂಡಂದಿರಿಗೆ ಹೆದರಿ ತಂದ ಸಾಮಾನುಗಳನ್ನು ಮುಚ್ಚಿ ಇಡುವುದರಲ್ಲಿ ಪಡುವ ಹರಸಾಹಸದೊಂದಿಗೆ ಬೆಳೆಯುತ್ತಾ ಹೋಗುತ್ತದೆ. ಇದರಲ್ಲಿ ಆಡಿಯನ್ಸ್ ನ್ನು ಕೂಡಾ ಜೊತೆಗೆ ಬಳಸಿಕೊಂಡು ಹಾಸ್ಯಾಸ್ಪದವಾಗಿ ಎಲ್ಲರ ಮುಖದಲ್ಲಿ ನಗು ತರಿಸುವ ಕೆಲಸವು ಇವರ ಪ್ರತೀ ಡೈಲಾಗ್ ನಲ್ಲಿ ಕೇಳಿಬರುವುದು ಪ್ರೇಕ್ಷಕರನ್ನು ಮತ್ತಷ್ಟು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಇಲ್ಲಿ ಪ್ರತೀ ಸನ್ನಿವೇಶಕ್ಕೂ, ಪ್ರತೀ ಸಂಭಾಷಣೆಗೂ ಅರ್ಥಗತವಾಗಿ ಜೀವ ತುಂಬಿಸಿದ ಕಲಾವಿದರ ಎನರ್ಜಿಗೆ ಮಾತ್ರ ಭೇಷ್ ಅನ್ನಲೇ ಬೇಕು.
ಬಹಳ ಸಿಂಪಲ್ ಆಗಿ ತೋರಿಸೋ ಪ್ರಾಪರ್ಟಿ ;
ಇದರಲ್ಲಿ ಇಬ್ಬರು ಹೆಂಗಸರು ಸಾಮಾನುಗಳನ್ನೆಲ್ಲ ಹೊಟ್ಟೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಾ ಗರ್ಭಿಣಿಯರಂತೆ ನಟಿಸುವುದು ಇಡೀ ವ್ಯವಸ್ಥೆಯನ್ನೇ ಹಂಗಿಸುತ್ತದೆ. ಗಂಡಂದಿರು ಗರ್ಭಾವಸ್ಥೆಯಲ್ಲಿನ ಹೆಣ್ಣಿನ ಆರೈಕೆಯ ಜೊತೆ, ಹೊಟ್ಟೆಯೊಳಗಿನ ಮಗುವಿನ ಕಾಳಜಿ ಇವೆಲ್ಲಾ ನಾಟಕೀಯವೆಂದು ಅರಿಯದೆ ಹಾಸ್ಯದಲ್ಲೇ ಹೋಗುವುದರ ಜೊತೆಗೆ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ನಗುವೂ ಇದರ ಮಧ್ಯೆ ಬಂದು ಹೋಗುತ್ತವೆ. ಒಂದೇ ಮನೆಯ ಕಿಟಕಿ, ಬಾಗಿಲನ್ನು ಅತ್ತಿಂದಿತ್ತ ಇತ್ತಿಂದತ್ತ ಸಲೀಸಾಗಿ, ಬಹಳ ಸಿಂಪಲ್ ಆಗಿ ತೋರಿಸೋ ಪ್ರಾಪರ್ಟಿ ಕೂಡಾ ಇದರ ಇನ್ನೊಂದು ಭಾಗ. ಹೌದು… ದೈನಂದಿನ ಹೋರಾಟಗಳನ್ನೇ ಇಲ್ಲಿ ಸೂಕ್ಷ್ಮವಾಗಿ ಬಹಳ ನಾಜೂಕಿನಿಂದ ಬರೆಯಲಾಗಿದೆ ಕೂಡಾ. ಇಬ್ಬರೂ ಗಂಡಂದಿರು ಜಗಳ ಬಿಟ್ಟು ತಮ್ಮ ಹೆಂಡತಿಯರ ಜೊತೆ ನಿಲ್ಲುತ್ತಾರಾ… ? ಈ ರಾಜಕೀಯ ವ್ಯವಸ್ಥೆಯ ಕಥೆಯ ಅಂತಿಮ ಹೇಗಿರುತ್ತೆ ? ಮುಂತಾದ ಪ್ರಶ್ನೆಗಳನ್ನು ಪ್ರೇಕ್ಷಕರಾಗಿ ನೀವೇ ಒಂದೇ ಒಂದು ಸಲ ಈ ನಾಟಕವನ್ನು ಬಿಡುವು ಮಾಡಿಕೊಂಡು ನೋಡುವುದೇ ಉತ್ತಮ ಎನಿಸುತ್ತೆ. ಹೌದು…. ಒಂದೊಳ್ಳೆ ನಾಟಕ ಅದ್ಭುತವಾಗಿ ಮೂಡಿ ಬಂದಿರುವುದಕ್ಕೆ ನೀವೂ ಕೂಡಾ ಸಾಕ್ಷಿಯಾದರೆ ಇಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ಕಲಾವಿದನಿಗೂ ಹೆಮ್ಮೆ ಎನಿಸುತ್ತದೆ.
ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗ ಮಯೂರಿ ಕಲಾ ಶಾಲೆಯಲ್ಲಿ , ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಘಟಕ ಸುಳ್ಯದ ಸಹಯೋಗದೊಂದಿಗೆ ಇಲ್ಲಿ ಪ್ರಥಮ ಬಾರಿಗೆ ಚಿತ್ರ ನಟ, ನಿರ್ಮಾಪಕ ಪ್ರಕಾಶ್ ರಾಜ್ ಹಾಗೂ ಶಕೀಲ್ ಅಹ್ಮದ್ ರ ನಿರ್ದೇಶನದಲ್ಲಿ ಮೂಡಿ ಬಂದ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕವು ನಿವೃತ್ತ ಶಿಕ್ಷಕಿ, ಸಾಹಿತಿ ಶ್ರೀಮತಿ ಜಯಮ್ಮ ಚೆಟ್ಟಿಮಾಡ ರವರ ದೀಪ ಪ್ರಜ್ವಲನೆಯ ಮುಖಾಂತರ ಚಾಲನೆ ಕಂಡಿತು. ಮುಖ್ಯ ಅಭ್ಯಾಗತರಾಗಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೆಶಕರಾದ ಡಾ. ಯು. ಪಿ. ಶಿವಾನಂದ ರವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಂಗ ನಿರ್ದೇಶಕ , ರಂಗಮನೆಯ ಸಂಚಾಲಕ ಜೀವನ್ ರಾಂ ಸುಳ್ಯ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಅರೆಭಾಷೆ ಅಕಾಡೆಮಿ ನಿಕಟ ಪೂರ್ವಾಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ, ಲೇಖಕ ಸಾಹಿತಿ ಡಾ. ಸುಂದರ ಕೇನಾಜೆ, ವೆಂಕಟರಮಣ ಸೊಸೈಟಿ ಸಿ. ಇ. ಒ ಕೆ. ಟಿ. ವಿಶ್ವನಾಥ, ನಾಟಕ ತಂಡದ ವ್ಯವಸ್ಥಾಪಕ ಕಲ್ಲಪ್ಪ ಬೆಳಗಾಂ ಉಪಸ್ಥಿತರಿದ್ದರು.
ರಂಗಮಯೂರಿ ಸಂಚಾಲಕ ಲೋಕೇಶ್ ಊರುಬೈಲು ಸ್ವಾಗತಿಸಿ, ವಂದಿಸಿದರು. ಈ ನಾಟಕವನ್ನು ಅಂದಗಾಣಿಸಿ ರಂಗದ ಮೇಲೆ ಕಾಣಿಸಿಕೊಂಡವರು ; ಸಲ್ಮಾ ದಂಡಿನ್, ದಿನೇಶ್ ನಾಯ್ಕ್, ಚರಿತ್ ಸುವರ್ಣ, ಚರಿತಾ ಶಾರದಾ, ಮಂಜುನಾಥ ಮಂಡಲಗೇರಿ.
Artists who brought dialogue to life: A wonderful play by five people – ತುಳು ಟೈಮ್ಸ್
ಇದನ್ನೂ ಓದಿ :ಹಣ್ಣಿನ ವಾಸನೆಯ ಉಸಿರಾಟ ಮಧುಮೇಹದ ಆರಂಭಿಕ ಎಚ್ಚರಿಕೆ ಲಕ್ಷಣ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/XyP1Yl5GcG0?si=_SJWmeFra8tQb4en











