Puttur: ಸಂಚಾರಿ ನಿಯಮ ಪಾಲಿಸಿಲ್ಲ ಎಂಬ ಕಾರಣಕ್ಕೆ ಆಟೋ ಚಾಲಕನಿಗೆ ಅವಾಚ್ಯ ಪದ ಬಳಸಿ, ಮೈಮೇಲೆ ಕೈ ಮಾಡಿದ ಪ್ರಕರಣ ನಡೆದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದರ್ಬೆ ಸಮೀಪ ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಸಂಚಾರಿ ಪೊಲೀಸರು ದರ್ಪ ಮೆರೆದಿದ್ದಾರೆ. ಸಂಚಾರಿ ಪೊಲೀಸರ ಈ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಟ್ರಾಫಿಕ್ ಪೊಲೀಸರು ಆಟೋ ರಿಕ್ಷಾಕ್ಕೆ ಅಡ್ಡಲಾಗಿ ಬಂದು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸುವುದು ಕಂಡುಬರುತ್ತದೆ.
ಈ ವಿಡಿಯೋ ಸೋಷಿಯಲ್ ಮಿಡೀಯಾದಲ್ಲಿ ಹರಿದಾಡಿದ್ದು, ಸಂಚಾರಿ ಪೊಲೀಸರ ವರ್ತನೆ ಕಂಡು ಹಲವರು ಕಿಡಿಕಾರಿದ್ದಾರೆ. ಈ ಪ್ರಕರಣವನ್ನು ಜಿಲ್ಲಾ ವರಿಷ್ಠಾಧಿಕಾರಿಗಳ ಗಮನ ಸೆಳೆಯುವವರೆಗೂ ಹಂಚಿಕೊಳ್ಳಿ ಎಂದು ವಿನಂತಿಸಿ ಮತ್ತಷ್ಟು ವಾಟ್ಸಪ್ ಗ್ರೂಪ್‌ಗಳಿಗೆ ವಿಡಿಯೋ ಹರಿದಾಡುವಂತೆ ಮಾಡಿದ್ದಾರೆ.
ಘಟನಾ ಸ್ಥಳದಲ್ಲಿ ಜನರು ಸೇರುತ್ತಿದ್ದಂತೆ, ಪೊಲೀಸರು ಆಟೋ ಚಾಲಕನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ವಿಡಿಯೋ ಮಾಡಿದ ಮೊಬೈಲ್ ನೀಡುವಂತೆ ಹೇಳಿದ್ದಲ್ಲದೆ, ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದಾಗಿಯೂ ತಿಳಿದುಬಂದಿದೆ.
ಹಲ್ಲೆಗೊಳಗಾದ ಆಟೋ ಡ್ರೈವರ್ ನಂತರ ಡಿವೈಎಸ್ಪಿ ಕಚೇರಿಗೆ ತೆರಳಿ ಮೌಖಿಕವಾಗಿ ದೂರು ನೀಡಿರುವುದಾಗಿಯೂ, ಹಲ್ಲೆಯಿಂದ ನೋವು ಕಾಣಿಸಿಕೊಂಡ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ತಿಳಿಸಿದ್ದಾರೆ.
ವೀಡಿಯೊದಲ್ಲಿ ಇಬ್ಬರು ಪೊಲೀಸರ ತಪ್ಪು ಸ್ಪಷ್ಟವಾಗಿ ತೋರುತ್ತಿದ್ದು, ಘಟನೆಯ ಕಾರಣವನ್ನು ಪರಿಶೀಲಿಸಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯ ಪ್ರಕಟಣೆ ತಿಳಿಸಿದೆ. ಸಾರ್ವಜನಿಕ ವಲಯದಲ್ಲಿ ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ: Panolibail ಕ್ಷೇತ್ರದಲ್ಲಿ ಹೊಸ ಅಕ್ಕಿಯ ಅಗೇಲು ಸೇವೆ.! ವಿಶೇಷತೆಯೇನು?
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











