ಕಣ್ಣೂರು : Tulu Times l ಶಬರಿಮಲೆ ಚಿನ್ನ ಕಳವು ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಶಬರಿಮಲೆ ದೇವಾಲಯದ ಪ್ರಧಾನ ಅರ್ಚಕ (ತಂತ್ರಿ) ಕಂದರಾರು ರಾಜೀವರಾರು ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ಇವರನ್ನು ಬಂಧಿಸಿದ ದಿನವೇ, ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಶುಕ್ರವಾರ ಈ ಚಿನ್ನ ಕಳವು ಘಟನೆಯು ತಂತ್ರಿ ಮತ್ತು ಮಾಜಿ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರ ಸಂಯುಕ್ತ ಕೃತ್ಯ ಎಂದು ಆರೋಪಿಸಿದರು.
ಈ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವ ಹೆಸರುಗಳವರೆಗೆ SIT ತನಿಖೆ ಇನ್ನೂ ತಲುಪಿಲ್ಲ ಎಂದು ಹೇಳಿದರು. ಇದೇ ವೇಳೆ ಸನ್ನಿ ಜೋಸೆಫ್ ಮಾತನಾಡಿ, SIT ತನಿಖೆ ಸಂಪೂರ್ಣ ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯಪಟ್ಟರುಕಡಕಂಪಳ್ಳಿ ಸುರೇಂದ್ರನ್ ಅವರನ್ನು ವಿಚಾರಣೆ ಮಾಡಿದ ವಿವರಗಳನ್ನು ಬಹಿರಂಗಪಡಿಸಬೇಕು. ಇಲ್ಲಿ ತಂತ್ರಿಯ ಬಂಧನ ಒಂದು ಬೆಳವಣಿಗೆಯಾಗಿದೆ. ಆದರೆ ಸುರೇಂದ್ರನ್ ಅವರ ವಿಚಾರಣೆಯಲ್ಲಿ ಏನಾಯಿತು ಎಂಬುದನ್ನು ಜನರು ತಿಳಿಯಲು ಬಯಸುತ್ತಾರೆ ಎಂದು ಅವರು ಹೇಳಿದರು.
ಸುರೇಂದ್ರನ್ ಅವರು ತಮ್ಮನ್ನು SIT ವಿಚಾರಣೆ ಮಾಡಿಲ್ಲ, ಕೆಲ ಮಾಹಿತಿಯನ್ನು ಮಾತ್ರ ಸಂಗ್ರಹಿಸಿದ್ದಾರೆ ಎಂದು ಹೇಳಿದ್ದಾರೆ. SIT ಅಧಿಕಾರಿಗಳು ಮಾಜಿ ಸಚಿವರನ್ನು ನಿಜವಾಗಿಯೂ ವಿಚಾರಣೆ ಮಾಡಿದ್ದಾರೆಯೇ ಎಂಬುದು ನನ್ನ ಪ್ರಶ್ನೆ. ಕೇರಳದ ಜನರಿಗೆ ಇದು ತಿಳಿಯಬೇಕು ಎಂದು ಜೋಸೆಫ್ ಹೇಳಿದರು.
ದೇವಾಲಯದ ಆವರಣದಿಂದ ನಾಪತ್ತೆಯಾಗಿರುವ ಬೆಲೆಬಾಳುವ ಆಭರಣಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಯ್ಯಪ್ಪ ಸ್ವಾಮಿಗೆ ಅಲಂಕರಿಸಲಾಗುವ ಕೆಲವು ಪುರಾತನ ಮತ್ತು ಪವಿತ್ರ ಆಭರಣಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ದೇವಸ್ವಂ ಮಂಡಳಿಯು ತನಿಖೆಗೆ ಆದೇಶಿಸಿತ್ತು. ಆರಂಭದಲ್ಲಿ ಇದು ಸಾಮಾನ್ಯ ಆಡಳಿತಾತ್ಮಕ ಲೋಪ ಎಂದು ಭಾವಿಸಲಾಗಿತ್ತಾದರೂ, ತನಿಖೆ ಆಳಕ್ಕಿಳಿದಂತೆ ಇದು ವ್ಯವಸ್ಥಿತವಾಗಿ ನಡೆದ ಕಳವು ಎಂಬ ಶಂಕೆ ವ್ಯಕ್ತವಾಗಿ ಕೇರಳದ SIT ತಂಡ ಸತ್ಯದ ಜಾಡನ್ನು ಹುಡುಕುತ್ತಾ ಹೊರಟಿದೆ.
ಇದನ್ನೂ ಓದಿ : ಪೊಲೀಸ್ ಇಲಾಖೆ ವಿರುದ್ಧ ಬಿಜೆಪಿಯಿಂದ ಸಂಘಟಿತ ಹೋರಾಟ: ಡಿ.ವಿ ಸದಾನಂದ ಗೌಡ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/KcQsy5NyWmM?si=7goZOTKjyhLsC5Cf











