ಆಟಿಕೆಗಳು : Tulu Times | ನೀವು ಹೊಸ ಪೋಷಕರಾಗಿದ್ದರೆ, ನಿಮ್ಮ ಮಗು ನೀವು ಜಾಗರೂಕತೆಯಿಂದ ಖರೀದಿಸಿದ ಆಟಿಕೆಗಳಿಗಿಂತ ಗ್ಲಾಸ್, ತಟ್ಟೆ, ಬಾಕ್ಸ್ ಹೀಗೆ ಮನೆಯ ದಿನನಿತ್ಯದ ವಸ್ತುಗಳಲ್ಲೇ ಹೆಚ್ಚು ಆಸಕ್ತಿ ತೋರಿಸುತ್ತಿರುವುದನ್ನು ಗಮನಿಸಿದ್ದಿರಬಹುದು. ಆದರೆ ಆಟಿಕೆ ಖರೀದಿಸುವಾಗ ಮಾತ್ರ ‘ಸರಿಯಾದ ಆಯ್ಕೆ ಮಾಡಬೇಕೆಂಬ’ ಒತ್ತಡ ಎಲ್ಲಾ ಪೋಷಕರಿಗೂ ಇರುತ್ತದೆ. ಅವು ವಿಷರಹಿತ, ಪರಿಸರ ಸ್ನೇಹಿ ಮತ್ತು ಸಾಧ್ಯವಾದರೆ ಶೈಕ್ಷಣಿಕವಾಗಿರಬೇಕು ಎಂಬ ನಿರೀಕ್ಷೆಯೂ ಇರುತ್ತದೆ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ‘ಮಾಂಟೆಸರಿ ಆಟಿಕೆಗಳು’ ಪೋಷಕರ ನಡುವೆ ಒಂದು ಮಾನದಂಡದಂತೆ ಹೆಸರು ಮಾಡುತ್ತಿವೆ.
ನೈಜ ಅನುಭವಗಳ ಮೂಲಕ ಕಲಿಕೆಗೆ ಪ್ರೇರಣೆ ;
ಬೆಂಗಳೂರಿನ ಡಾ. ಪರಿಮಳಾ ವಿ ತಿರುಮಲೇಶ್, ಹಿರಿಯ ಸಲಹೆಗಾರರು, ನೀಯೋನಟಾಲಜಿ ಮತ್ತು ಪೀಡಿಯಾಟ್ರಿಕ್ಸ್, ಆಸ್ಟರ್ ಸಿಎಂಐ ಆಸ್ಪತ್ರೆ, ಅವರ ಪ್ರಕಾರ, ಮಾಂಟೆಸರಿ ವಿಧಾನವು ಮಕ್ಕಳ ಕೇಂದ್ರಿತ ಕಲಿಕೆಯ ವಿಧಾನವಾಗಿದ್ದು, ಸ್ವತಂತ್ರತೆ, ಕೈಯಿಂದ ಮಾಡುವ ಚಟುವಟಿಕೆಗಳು ಮತ್ತು ಮಗುವಿನ ಸ್ವಂತ ವೇಗದಲ್ಲಿ ಕಲಿಕೆಗೆ ಒತ್ತು ನೀಡುತ್ತದೆ. ಈ ವಿಧಾನ ಮಕ್ಕಳಿಗೆ ಅನ್ವೇಷಣೆ, ಆಯ್ಕೆ ಮಾಡುವ ಸ್ವಾತಂತ್ರ್ಯ ಮತ್ತು ನೈಜ ಅನುಭವಗಳ ಮೂಲಕ ಕಲಿಕೆಗೆ ಪ್ರೇರಣೆ ನೀಡುತ್ತದೆ. ಮಾಂಟೆಸರಿ ಆಟಿಕೆಗಳು ಸರಳವಾಗಿದ್ದು, ಸಾಮಾನ್ಯವಾಗಿ ಮರದಿಂದ ತಯಾರಿಸಲ್ಪಟ್ಟಿರುತ್ತವೆ. ಇವು ಒಂದೇ ಸಮಯದಲ್ಲಿ ಒಂದೊಂದು ಕೌಶಲ್ಯವನ್ನು ಕಲಿಸಲು ವಿನ್ಯಾಸಗೊಳಿಸಲ್ಪಟ್ಟಿವೆ – ಉದಾಹರಣೆಗೆ ವಿಂಗಡಣೆ, ರಾಶಿ ಹಾಕುವುದು, ಎಣಿಕೆ ಅಥವಾ ಸಮಸ್ಯೆ ಪರಿಹಾರ. ಇವು ಬೆಳಕು, ಶಬ್ದ ಅಥವಾ ಪರದೆಗಳನ್ನು ಬಳಸುವುದಿಲ್ಲ; ಬದಲಾಗಿ ಗಮನ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುತ್ತವೆ ಎಂದು ಹೇಳಿದ್ದಾರೆ.
ಡಾ. ಕೆಸಿರೆಡ್ಡಿ ಅವರ ಪ್ರಕಾರ, ಮಾಂಟೆಸರಿ ಆಟಿಕೆಗಳು:
ಗಮನ ಶಕ್ತಿ ಹೆಚ್ಚಿಸಲು, ಸೂಕ್ಷ್ಮ ಚಲನಾ ಕೌಶಲ್ಯ ಅಭಿವೃದ್ಧಿಗೆ, ಕೈ–ಕಣ್ಣು ಸಂಯೋಜನೆಗೆ, ಸಮಸ್ಯೆ ಪರಿಹಾರ ಸಾಮರ್ಥ್ಯಕ್ಕೆ ಸಹಾಯ ಮಾಡುತ್ತವೆ. ಇವು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತವೆ ಮತ್ತು ಗಾತ್ರ, ಆಕಾರ, ಸಂಖ್ಯೆ, ಕ್ರಮ ಮುಂತಾದ ಆರಂಭಿಕ ಶೈಕ್ಷಣಿಕ ಕಲ್ಪನೆಗಳನ್ನು ವಯಸ್ಸಿಗೆ ತಕ್ಕಂತೆ ಪರಿಚಯಿಸುತ್ತವೆ. ಮಾಂಟೆಸರಿ ಆಟಿಕೆಗಳು ಮಕ್ಕಳಿಗೆ ಕೈಯಿಂದ ಮಾಡುವ ಆಟ ಮತ್ತು ನೈಜ ಜೀವನದ ಚಟುವಟಿಕೆಗಳ ಮೂಲಕ ಕಲಿಕೆಗೆ ಅವಕಾಶ ನೀಡುತ್ತವೆ. ಮಕ್ಕಳು ಸ್ವತಃ ಅನ್ವೇಷಿಸಿ ಸಮಸ್ಯೆಗಳನ್ನು ಪರಿಹರಿಸುವುದರಿಂದ ಸ್ವಾವಲಂಬನೆ, ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳು ಬಾಲ್ಯದಲ್ಲೇ ಬೆಳೆಯುತ್ತವೆ ಎನ್ನಲಾಗಿದೆ. ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ಆಟಿಕೆ ಯಾವುದು ಎಂಬುದಕ್ಕಿಂತ, ಮಗುವಿಗೆ ನೀಡುವ ಸಮಯ, ಸ್ವಾತಂತ್ರ್ಯ ಮತ್ತು ಪ್ರೀತಿ ಇವೇ ಬೆಳವಣಿಗೆಯ ನಿಜವಾದ ಅಡಿಪಾಯವಾಗಿದೆ.
What are Montessori games? Do they really have an impact on children? – ತುಳು ಟೈಮ್ಸ್
ಇದನ್ನೂ ಓದಿ :ಬೀದಿ ನಾಯಿಗಳ ಕುರಿತು ಮರು ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು ?
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/emwzylibjoc?si=Sca-qvxtKSUITymq











